ADVERTISEMENT

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ ಯೋಜನೆ: ಪರಿಹಾರ ಸೂತ್ರ ತಿರಸ್ಕರಿಸಿದ ರೈತರು

ಕೇಂದ್ರ ಭೂ ಸ್ವಾಧೀನ ಕಾಯ್ದೆ 2013ರಡಿ ಸೂಕ್ತ ಪರಿಹಾರಕ್ಕೆ ಪಟ್ಟು

ಕೆ.ಎಸ್.ಸುನಿಲ್
Published 1 ನವೆಂಬರ್ 2025, 0:00 IST
Last Updated 1 ನವೆಂಬರ್ 2025, 0:00 IST
ಬಿಡಿಎ
ಬಿಡಿಎ   

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1 ಬಿಬಿಸಿ) ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪರಿಹಾರ ನೀಡುವ ಸಂಬಂಧ, ಸರ್ಕಾರ ರೂಪಿಸಿರುವ ಪರಿಹಾರ ಸೂತ್ರವನ್ನು ರೈತರು ತಿರಸ್ಕರಿಸಿದ್ದಾರೆ.

ಸ್ವಾಧೀನಪಡಿಸಿಕೊಳ್ಳುವ ಜಮೀನಿನ ಭೂ ಮಾಲೀಕರಿಗೆ ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿಟ್ಟುಕೊಂಡು ಸಂಧಾನ ಸೂತ್ರದ ಮೂಲಕ ಭೂ ಸ್ವಾಧೀನ ಕಾಯ್ದೆ 1894ರಡಿ ಪರಿಹಾರ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿತ್ತು. ಇದಕ್ಕೆ ಭೂ ಮಾಲೀಕರು ಒಪ್ಪಲಿಲ್ಲ.

ಸರ್ಕಾರ ಹಾಗೂ ಬಿಡಿಎ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನಾಲ್ಕು ರೀತಿಯಲ್ಲಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ADVERTISEMENT

ಮಾರುಕಟ್ಟೆ ದರದಲ್ಲಿ ನಗರ ಭಾಗದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರು ಪಟ್ಟು ನಗದು ಪರಿಹಾರ ಅಥವಾ ವರ್ಗಾಯಿಸಬಹುದಾದ ಹಕ್ಕು (ಟಿಡಿಆರ್) ಅಥವಾ ನೆಲ ವಿಸ್ತೀರ್ಣ ಅನುಪಾತ ( ಎಫ್ಎಆರ್) ಅಥವಾ ಶೇ 35ರಷ್ಟು ವಾಣಿಜ್ಯ ಭೂಮಿಯನ್ನು ಪಡೆಯಬಹುದು. ಒಂದು ವೇಳೆ ವಾಣಿಜ್ಯ ಭೂಮಿ ಬೇಡ, ವಸತಿ ಪ್ರದೇಶದಲ್ಲಿ ಜಾಗ ಬೇಕು ಎಂದರೆ ಬಿಡಿಎ ನಿರ್ಮಿಸುತ್ತಿರುವ ನೂತನ ಬಡಾವಣೆಗಳಲ್ಲಿ ಶೇ 40ರಷ್ಟು ಜಾಗ ನೀಡಲಾಗುತ್ತದೆ.

ಬಿಡಿಎ ಕಾಯ್ದೆಯಲ್ಲಿ, ಕೇಂದ್ರದ ಹೊಸ ಕಾಯ್ದೆ ಅನುಸಾರ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ. 20 ಗುಂಟೆಗಿಂತ ಒಳಗೆ ಭೂಮಿ ಕಳೆದುಕೊಳ್ಳುವವರಿಗೆ ನಗದು ಪರಿಹಾರ ಮಾತ್ರ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಭೂಮಿ ಕಳೆದುಕೊಳ್ಳುವವರಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರ ಸೂತ್ರ ತಿರಸ್ಕರಿಸಿರುವ ರೈತರು, ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು ಹಾಗೂ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. 

‘ಮೆಟ್ರೊ, ರೈಲ್ವೆ ಸೇರಿ ಅನೇಕ ಸರ್ಕಾರಿ ಇಲಾಖೆಗಳು ಕೇಂದ್ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡುತ್ತಿವೆ. ಬಿಬಿಸಿ ಯೋಜನೆ ಸಂತ್ರಸ್ತರಿಗೆ ಈ ಕಾಯ್ದೆ ಅನ್ವಯಿಸುವುದಿಲ್ಲವೇ’ ಎಂದು ರೈತರು ಪ್ರಶ್ನಿಸಿದ್ದಾರೆ.

2006–07ರಲ್ಲಿ ಈ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, 20 ವರ್ಷ ರೈತರು ನೋವು, ಕಷ್ಟ ಎದುರಿಸಿದ್ದಾರೆ. ಇನ್ನಾದರೂ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘ಬಿಬಿಸಿ ಯೋಜನೆಗೆ 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಈವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ. ಹಳೆಯ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಪರಿಹಾರ ಪಡೆಯಲು ಸರ್ಕಾರ ನೀಡಿರುವ ನಾಲ್ಕು ಆಯ್ಕೆಗಳು ರೈತರಿಗೆ ಮರಣ ಶಾಸನವಾಗಲಿವೆ. ಬಿಡಿಎ ಕಾಯ್ದೆ 1894ರ ಸೆಕ್ಷನ್ 27ರ ಪ್ರಕಾರ ಐದು ವರ್ಷಗಳ ಅವಧಿ ಮುಗಿದಿರುವುದರಿಂದ ಪಿಆರ್‌ಆರ್ ಭಾಗ -1 ಯೋಜನೆಯನ್ನು ರದ್ದುಗೊಳಿಸಿ, ಎಲ್ಲ ಭೂ ಮಾಲೀಕರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕು’ ಎಂದು ಹಳ್ಳಿ ವರ್ತೂರಿನ ಜಗದೀಶ್ ಒತ್ತಾಯಿಸಿದರು.

‘ಯೋಜನೆಗೆ ಒಂದು ವೇಳೆ ಯಾರಾದರೂ ಭೂಮಿ ನೀಡಲು ನಿರಾಕರಿಸಿದರೆ, ಸಹಜ ಸ್ವಾಧೀನ ಪ್ರಕ್ರಿಯೆ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು ಯೋಜನೆ ಮುಂದುವರಿಸಲು ಸರ್ಕಾರ ನಿರ್ದೇಶನ ನೀಡಿದೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ. ಟಿಡಿಆರ್ ವಿನಿಮಯ ಪ್ರಾರಂಭಿಸುವಂತೆ ಸೂಚಿಸಿದೆ. ಭೂಮಿ ಕಳೆದುಕೊಳ್ಳುವವರು ನೋಂದಣಿ ಮಾಡಿಕೊಂಡು, ಈ ಟಿಡಿಆರ್ ವಿನಿಮಯ ಮಾಡಿಕೊಳ್ಳಬಹುದಾಗಿದೆ’ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.  

ರೈತರ ಸಭೆ ನಡೆಸಿ ಹೋರಾಟ ನಿರ್ಧಾರ: ಶ್ರೀನಿವಾಸ್

‘ಯೋಜನೆಗೆ ಭೂಮಿ ನೀಡಲು ತಕರಾರು ಇಲ್ಲ. ಆದರೆ ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು ಹಾಗೂ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕು. ಸಾಧ್ಯವಾಗದಿದ್ದರೆ ಯೋಜನೆ ರದ್ದುಪಡಿಸಲಿ. ಮುಂದಿನ ವಾರ ರೈತರ ಸಭೆ ನಡೆಸಿ ಯೋಜನೆ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ರೈತ ಮುಖಂಡ ಬಿ.ಶ್ರೀನಿವಾಸ್ ತಿಳಿಸಿದರು.

‘77 ಗ್ರಾಮಗಳ ರೈತ ಮುಖಂಡರ ಜತೆ ಸಭೆ ನಡೆಸಿದ್ದು ಯಾರಿಗೂ ಒಪ್ಪಿಗೆ ಇಲ್ಲ. ಯೋಜನೆ ರದ್ದುಪಡಿಸುವಂತೆ 700ಕ್ಕೂ ಅಧಿಕ ರೈತರು ಹೈಕೋರ್ಟ್‌ ಮೊರೆಹೋಗಿದ್ದಾರೆ. ಭೂ ಸ್ವಾಧೀನ ಕಾಯ್ದೆಯಲ್ಲೂ ಏಕರೂಪತೆ ತರಲು ಎರಡನೇ ಆಡಳಿತ ಸುಧಾರಣಾ ಆಯೋಗ ಸಲಹೆ ನೀಡಿದೆ. ಭೂಸ್ವಾಧೀನ ಪರಿಹಾರ ಪುನರ್ವಸತಿ ಮತ್ತು ಪುನರ್‌ವ್ಯವಸ್ಥೆ ಕಾಯ್ದೆ 2013ಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಬೇಕು ಅಥವಾ ಅಳವಡಿಸಿಕೊಳ್ಳಬೇಕು. ಇದರಿಂದ ಭೂಮಾಲೀಕರ ಹಕ್ಕುಗಳನ್ನು ರಕ್ಷಿಸುವ ಜತೆಗೆ ಕೋರ್ಟ್‌ನಲ್ಲಿ ದಾಖಲಾಗುವ ಪ್ರಕರಣಗಳು ಕಡಿಮೆ ಆಗಲಿವೆ’ ಎಂದು ಹೇಳಿದರು.

ರೈತರ ಜತೆ ಮಾತುಕತೆ: ಅತೀಕ್

ಬಿಬಿಸಿ ಯೋಜನೆಗೆ ಭೂಮಿ ನೀಡುವ ರೈತರಿಗೆ ಐದು ಪರಿಹಾರ ಆಯ್ಕೆಗಳನ್ನು ನೀಡಲಾಗಿದೆ. ರಾಜ್ಯದ ಯಾವುದೇ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಹಿಂದೆಂದೂ ನೀಡದಂತಹ ವಿಸ್ತೃತ ಆಯ್ಕೆಗಳಾಗಿವೆ. ನವೆಂಬರ್‌ನಲ್ಲಿ ರೈತರಿಗೆ ಈ ಆಯ್ಕೆಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು. ಎಲ್‌ಎಕ್ಯೂ ಮತ್ತು ಆರ್‌ಆರ್‌ 2013ರ ಕಾಯ್ದೆ ಪ್ರಕಾರ ನಗದು ಪರಿಹಾರ ಪಾವತಿಸಲಾಗುವುದು. ನಗರದ ಪ್ರದೇಶದಲ್ಲಿ ಪ್ರಸ್ತುತ ಮಾರ್ಗಸೂಚಿ ದರದ ಎರಡು ಪಟ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂರು ಪಟ್ಟು ನೀಡಲಾಗುವುದು.  2013ರ ಕಾಯ್ದೆಯಡಿ ಪರಿಹಾರ ನೀಡುವ ಬೇಡಿಕೆ ನ್ಯಾಯಯುತವಾಗಿದ್ದು ಭೂಮಾಲೀಕರು ಮತ್ತು ಕೆಲವು ರೈತ ಸಂಘಟನೆಗಳೊಂದಿಗೆ ಮಾತುಕತೆ ಮುಂದುವರಿಸಲಾಗುವುದು ಎಂದು ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಅಧ್ಯಕ್ಷ ಎಲ್‌.ಕೆ.ಅತೀಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.