ADVERTISEMENT

ಬೆಂಗಳೂರು: ಬ್ಲ್ಯಾಕ್‌ ಸ್ಪಾಟ್‌ ಸ್ವಚ್ಛತೆಗೆ ‘ಲಿಟ್ಟರ್ ಪಿಕ್ಕಿಂಗ್ ಯಂತ್ರ’

ಉತ್ತರ ನಗರ ಪಾಲಿಕೆಯಿಂದ ₹65 ಲಕ್ಷ ವೆಚ್ಚದಲ್ಲಿ ಯಂತ್ರ ಖರೀದಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
‘ಲಿಟ್ಟರ್ ಪಿಕ್ಕಿಂಗ್’ ಯಂತ್ರಕ್ಕೆ ಪೊಮ್ಮಲ ಸುನೀಲ್‌ಕುಮಾರ್‌ ಅವರು ಗುರುವಾರ ಚಾಲನೆ ನೀಡಿದರು
‘ಲಿಟ್ಟರ್ ಪಿಕ್ಕಿಂಗ್’ ಯಂತ್ರಕ್ಕೆ ಪೊಮ್ಮಲ ಸುನೀಲ್‌ಕುಮಾರ್‌ ಅವರು ಗುರುವಾರ ಚಾಲನೆ ನೀಡಿದರು   

ಬೆಂಗಳೂರು: ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಕಸವನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸುವುದು ಕಷ್ಟಕರವಾಗಿದ್ದು, ಈ ಸಮಸ್ಯೆ ನಿವಾರಿಸಲು  ‘ಲಿಟ್ಟರ್ ಪಿಕ್ಕಿಂಗ್ ಯಂತ್ರ’ವನ್ನು ಉತ್ತರ ನಗರ ಪಾಲಿಕೆ ₹65 ಲಕ್ಷ ವೆಚ್ಚದಲ್ಲಿ ಖರೀದಿಸಿದೆ.

ನಗರದ ಹೊರ ವ್ಯಾಪ್ತಿಯಲ್ಲಿ ವಸತಿ ಹಾಗೂ ವಾಣಿಜ್ಯ ಚಟುವಟಿಕೆಗಳು ವೇಗವಾಗಿ ವಿಸ್ತರಿಸುತ್ತಿರುವುದರಿಂದ ರಸ್ತೆ ಬದಿಗಳು, ಖಾಲಿ ನಿವೇಶನಗಳು ಹಾಗೂ ಚರಂಡಿಗಳಲ್ಲಿ ಸಾರ್ವಜನಿಕರು ಮತ್ತು ವಾಣಿಜ್ಯ ಸಂಸ್ಥೆಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಹಲವಾರು ‘ಗಾರ್ಬೇಜ್ ವಲ್ನರಬಲ್ ಪಾಯಿಂಟ್‌ಗಳು’ (ಜಿವಿಪಿ) ಹಾಗೂ ಬ್ಲಾಕ್ ಸ್ಪಾಟ್‌ಗಳು ನಿರ್ಮಾಣವಾಗುತ್ತಿದ್ದು, ಅವುಗಳನ್ನು ಕೈಯಿಂದ ಸ್ವಚ್ಛಗೊಳಿಸುವುದು ಪೌರಕಾರ್ಮಿಕರಿಗೆ ಕಷ್ಟಕರವಾಗುತ್ತಿದೆ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.

‘ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ‘ಲಿಟ್ಟರ್ ಪಿಕ್ಕಿಂಗ್’ ಯಂತ್ರವನ್ನು ₹65 ಲಕ್ಷ ವೆಚ್ಚದಲ್ಲಿ ಖರೀದಿಸಲಾಗಿದೆ. ಉತ್ತರ ನಗರ ಪಾಲಿಕೆಯ 72 ವಾರ್ಡ್‌ಗಳ ರಸ್ತೆಗಳಲ್ಲಿ ದೈನಂದಿನ ಸ್ವಚ್ಛತಾ ಕಾರ್ಯವನ್ನು ಪೌರಕಾರ್ಮಿಕರು ನಿರ್ವಹಿಸುತ್ತಿದ್ದು, ಮನೆ-ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಕಾರ್ಯವನ್ನು 1,018 ಆಟೋ ಟಿಪ್ಪರ್‌ಗಳ ಮೂಲಕ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ಲಿಟ್ಟರ್ ಪಿಕ್ಕಿಂಗ್ ವಾಹನವು ಆಧುನಿಕ ಸಕ್ಷನ್ ತಂತ್ರಜ್ಞಾನವನ್ನು ಬಳಸಿ ಹೋಸ್ ಪೈಪ್ ಮುಖಾಂತರ ರಸ್ತೆ ಬದಿಯ ತ್ಯಾಜ್ಯವನ್ನು ಹೀರಿಕೊಂಡು ವಾಹನದಲ್ಲಿರುವ ಕಂಟೈನರ್‌ನಲ್ಲಿ ಸಂಗ್ರಹಿಸುತ್ತದೆ. ಜೊತೆಗೆ ರಸ್ತೆ ಬದಿಯ ಹೂಳು, ಎಲೆಗಳು ಹಾಗೂ ಅರ್ಧ ದ್ರವ ತ್ಯಾಜ್ಯವನ್ನು ಸಹ ಸುಲಭವಾಗಿ ತೆರವುಗೊಳಿಸುತ್ತದೆ. ಪೌರಕಾರ್ಮಿಕರು ಪಾರಂಪರಿಕ ಪೊರಕೆಗಳಿಂದ ಸ್ವಚ್ಛತೆ ಮಾಡಲು ತೆಗೆದುಕೊಳ್ಳುವ ಸಮಯದ ಅರ್ಧಕ್ಕಿಂತ ಕಡಿಮೆ ಅವಧಿಯಲ್ಲಿ ತ್ಯಾಜ್ಯ ತೆರವು ಕಾರ್ಯವನ್ನು ಈ ಯಂತ್ರದ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ಜಿವಿಪಿ/ ಬ್ಲ್ಯಾಕ್‌ ಸ್ಪಾಟ್ ಸುಂದರೀಕರಣದ ಭಾಗವಾಗಿ ಬಳ್ಳಾರಿ ರಸ್ತೆ ಬಳಿ ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಹಾಗೂ ಮಾರ್ಷಲ್‌ಗಳಿಗೆ ವಾಲ್ ಪೇಂಟಿಂಗ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ತರಬೇತಿಯನ್ನು ‘ಅಗ್ಲಿ ಇಂಡಿಯನ್’ ತಂಡದ ಸಹಯೋಗದಲ್ಲಿ ನಡೆಸಲಾಯಿತು. ಈ ತರಬೇತಿ ಪಡೆದವರು, ಬ್ಲ್ಯಾಕ್‌ ಸ್ಪಾಟ್‌ಗಳನ್ನು ಸ್ವಚ್ಛ, ಆಕರ್ಷಕ ಹಾಗೂ ದೃಶ್ಯಾತ್ಮಕವಾಗಿ ಸುಂದರ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸಲಿದ್ದಾರೆ ಎಂದು ಹೇಳಿದರು.

50 ಆಸ್ತಿ ಹರಾಜು ಇಂದು:
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರ 50 ಸ್ವತ್ತುಗಳನ್ನು ಫೆ.27ರಂದು ಹರಾಜು ಹಾಕಲಾಗುವುದು. ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿನ ಒಟ್ಟು 30 ಸ್ವತ್ತುಗಳನ್ನು ಫೆ.21ರಂದು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಇದರಲ್ಲಿ 13 ಆಸ್ತಿಗಳ ಮಾಲೀಕರುಗಳು ಬಾಕಿ ಆಸ್ತಿ ತೆರಿಗೆಯನ್ನು ಸ್ಥಳದಲ್ಲೇ ಪಾವತಿಸಿದ್ದರು. ಉಳಿದ 17 ಬಾಕಿ ಆಸ್ತಿದಾರರ ಆಸ್ತಿಗಳು ಮತ್ತು ಹೆಚ್ಚುವರಿಯಾಗಿ 33 ಆಸ್ತಿಗಳನ್ನು ಸೇರಿಸಿ ಒಟ್ಟಾರೆ 50 ಆಸ್ತಿಗಳ ಹರಾಜು ಪ್ರಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೀದಿ ನಾಯಿಗಳಿಗೆ ಆಹಾರ: ಸ್ಥಳ ಗುರುತು

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು 90 ಸ್ಥಳ ಹಾಗೂ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 150 ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಪರಿಸರ ಸ್ವಚ್ಛತೆಯನ್ನು ಕಾಪಾಡುವ ಸದುದ್ದೇಶದಿಂದ ಅಧಿಕೃತ ಆಹಾರ ನೀಡುವ ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಲಾಗಿದೆ. ಈ ಸ್ಥಳ ಬಿಟ್ಟು ಬೇರೆಡೆ ನಾಗರಿಕರು ಆಹಾರ ನೀಡಬಾರದು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.