ಬೆಂಗಳೂರು: ಬೇರೊಬ್ಬ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆ ಮಾಡಿದ್ದು, ಈ ಸಂಬಂಧ ಆರೋಪಿ ವಿಠಲ್ (52) ಎಂಬಾತನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ವನಜಾಕ್ಷಿ (26) ಕೊಲೆಯಾದ ಮಹಿಳೆ.
ವಿಠಲ್ ಹಾಗೂ ವನಜಾಕ್ಷಿ ಆನೇಕಲ್ ತಾಲ್ಲೂಕಿನ ಮಳೆನಲ್ಲಸಂದ್ರದ ನಿವಾಸಿಗಳು.
‘ಆರೋಪಿ ವಿಠಲ್ ಕ್ಯಾಬ್ ಚಾಲನೆ ಮಾಡುತ್ತಿದ್ದ. ಆತನಿಗೆ ಎರಡು ಮದುವೆಯಾಗಿತ್ತು. ಮೊದಲ ಪತ್ನಿ ಮೃತಪಟ್ಟಿದ್ದರಿಂದ ಮತ್ತೊಂದು ಮದುವೆಯಾಗಿದ್ದ. ಪ್ರತಿನಿತ್ಯ ಮನೆಯಲ್ಲಿ ಆರೋಪಿ ಗಲಾಟೆ ಮಾಡುತ್ತಿದ್ದರಿಂದ ಎರಡನೇ ಪತ್ನಿ ಸಹ ಪ್ರತ್ಯೇಕವಾಗಿ ನೆಲಸಿದ್ದರು. ವನಜಾಕ್ಷಿ ಅವರಿಗೂ ಮದುವೆಯಾಗಿತ್ತು. ಕೆಲವು ತಿಂಗಳ ಹಿಂದೆ ಅವರ ಪತಿ ಮೃತಪಟ್ಟಿದ್ದರು. ಈ ನಡುವೆ ವಿಠಲ್ ಹಾಗೂ ವನಜಾಕ್ಷಿ ನಡುವೆ ಸ್ನೇಹ ಬೆಳೆದು ಸಹಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಕಳೆದ ಕೆಲವು ದಿನಗಳಿಂದ ವನಜಾಕ್ಷಿ ಅವರು ವಿಠಲ್‌ನನ್ನು ಕಡೆಗಣಿಸುತ್ತಿದ್ದರು. ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯೊಂದಿಗೆ ಹೆಚ್ಚು ಸಲುಗೆಯಿಂದ ಇರುತ್ತಿದ್ದರು. ಒಂದು ತಿಂಗಳಿನಿಂದ ಈ ವಿಚಾರಕ್ಕೆ ವಿಠಲ್ ಹಾಗೂ ವನಜಾಕ್ಷಿ ನಡುವೆ ಜಗಳವಾಗುತ್ತಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ವನಜಾಕ್ಷಿ ಅವರು ಮತ್ತೊಬ್ಬ ಸ್ನೇಹಿತನ ಜೊತೆ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಕಾರಲ್ಲಿ ತೆರಳುತ್ತಿದ್ದರು. ಕಾರಿನಲ್ಲಿ ತೆರಳುತ್ತಿರುವುದನ್ನು ಗಮನಿಸಿದ್ದ ಆರೋಪಿ, ಹೊಮ್ಮದೇವನಹಳ್ಳಿ ಬಳಿ ಕಾರನ್ನು ಅಡ್ಡಗಟ್ಟಿದ್ದ. ಕಾರು ಚಾಲನೆ ಮಾಡುತ್ತಿದ್ದ ಮುನಿಯಪ್ಪ ಅವರು ಕೆಳಕ್ಕೆ ಇಳಿದಿದ್ದರು. ವನಜಾಕ್ಷಿ ಅವರು ವಿಠಲ್‌ನನ್ನು ಗಮನಿಸಿ, ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು’ ಎಂದು ಪೊಲೀಸರು ಹೇಳಿದರು.
ಪೆಟ್ರೋಲ್ ಖರೀದಿಸಿದ್ದ ಆರೋಪಿ
‘ವನಜಾಕ್ಷಿ ಅವರನ್ನು ಕೊಲೆ ಮಾಡಲೆಂದೇ ಆರೋಪಿ ಐದು ಲೀಟರ್‌ನಷ್ಟು ಪೆಟ್ರೋಲ್ ಖರೀದಿಸಿಕೊಂಡು ಕ್ಯಾನ್‌ನಲ್ಲಿ ತಂದಿದ್ದ. ಕಾರಿನ ಮೇಲೆಯೇ ಪೆಟ್ರೋಲ್ ಸುರಿಯಲು ಯತ್ನಿಸಿದ್ದ. ಅಷ್ಟರಲ್ಲಿ ಸ್ನೇಹಿತನ ಜೊತೆ ಕಾರಿನಿಂದ ಇಳಿದ ವನಜಾಕ್ಷಿ ಓಡಿ ಹೋಗಲು ಪ್ರಯತ್ನಿಸಿದ್ದರು. ಇಬ್ಬರನ್ನೂ ಹಿಂಬಾಲಿಸಿಕೊಂಡು ಹೋಗಿದ್ದ ವಿಠಲ್ ಬಳಿಕ ವನಜಾಕ್ಷಿ ಮೇಲೆ ಪೆಟ್ರೋಲ್ ಎರಚಿ ಲೈಟರ್ನಿಂದ ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವನಜಾಕ್ಷಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ 60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರು ಭಾನುವಾರ ಮೃತಪಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ. ಮುನಿಯಪ್ಪ ಅವರು ನೀಡಿದ ದೂರು ಆಧರಿಸಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.