ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಲಷ್ಕರ್ ಎ ತಯಬಾ(ಎಲ್‌ಇಟಿ) ಸಂಘಟನೆಯ ಮುಖಂಡ ಟಿ.ನಾಸಿರ್‌ಗೆ ನೆರವು ನೀಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮೂವರು ಶಂಕಿತರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೋಮವಾರ ಆದೇಶಿಸಿತು.
ಕಾರಾಗೃಹದ ಮನೋವೈದ್ಯ ನಾಗರಾಜ್, ಶಂಕಿತ ಉಗ್ರ ಜುನೈದ್ ಅಹಮದ್ ತಾಯಿ ಅನೀಸ್ ಫಾತಿಮಾ ಹಾಗೂ ಎಎಸ್‌ಐ ಚಾಂದ್ ಪಾಷಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಿಗಿ ಭದ್ರತೆ ನಡುವೆ ಮೂವರನ್ನೂ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಉಗ್ರರ ಜತೆಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಮೂವರನ್ನು ಜುಲೈ 8ರಂದು ಎನ್‌ಐಎ ಬಂಧಿಸಿ, ಹೆಚ್ಚಿನ ವಿಚಾರಣೆಗೆ ಆರು ದಿನ ಕಸ್ಟಡಿಗೆ ಪಡೆದುಕೊಂಡಿತ್ತು. ಕಸ್ಟಡಿ ಅವಧಿ ಮುಕ್ತಾಯವಾದ ಮೇರೆಗೆ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಬಾಂಗ್ಲಾದೇಶಕ್ಕೆ ಕಳುಹಿಸಲು ಯತ್ನ: ‘ಮೂವರನ್ನು ಆರು ದಿನ ವಿಚಾರಣೆ ನಡೆಸಿದಾಗ ಕೆಲವೊಂದು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ‘ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
‘ಮೂವರ ಮೊಬೈಲ್ ಜಪ್ತಿ ಮಾಡಿಕೊಂಡು ಕರೆಗಳ ವಿವರ ಪರಿಶೀಲನೆ ನಡೆಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ.ನಾಸಿರ್‌ನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಗ್ರೆನೇಡ್ ಸ್ಫೋಟಿಸಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವಂತೆ ಯೋಜನೆ ರೂಪಿಸಲಾಗಿತ್ತು’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
‘ನಾಸಿರ್‌ಗೆ ಪೊಲೀಸ್ ಸಮವಸ್ತ್ರ ಧರಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲು ಸಂಚು ರೂಪಿಸಲಾಗಿತ್ತು. ಅದಕ್ಕಾಗಿ ಆರೋಪಿಗಳು 10 ಜೊತೆ ಪೊಲೀಸ್ ಸಮವಸ್ತ್ರ ಖರೀದಿಸಿದ್ದರು. ಸಮವಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಪೊಲೀಸ್ ಸಮವಸ್ತ್ರ ಖರೀದಿಗೆ ಎಎಸ್‌ಐ ಚಾಂದ್ ಪಾಷಾ ಸಹಾಯ ಮಾಡಿದ್ದ. ಚಾಂದ್ ಪಾಷಾ ಸೂಚನೆ ಮೇರೆಗೆ ಆರೋಪಿಗಳು ಶಿವಾಜಿನಗರದಲ್ಲಿ ಸಮವಸ್ತ್ರ ಖರೀದಿ ಮಾಡಿದ್ದರು. ನಾಸಿರ್‌ನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಜವಾಬ್ದಾರಿಯನ್ನು ಚಾಂದ್ ಪಾಷಾಗೆ ನೀಡಲಾಗಿತ್ತು. ನಾಸಿರ್‌ನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ನಿವೃತ್ತಿ ಅಂಚಿನಲ್ಲಿರುವ ಸಿಬ್ಬಂದಿಯನ್ನು ಚಾಂದ್ ಪಾಷಾ ನೇಮಕ ಮಾಡಿದ್ದ. ನಾಸಿರ್ ಪರಾರಿಯಾಗಲು ಮಾಡಿದ್ದ ಸಂಚಿನ ಭಾಗವಾಗಿತ್ತು. ದಾರಿ ಮಧ್ಯೆ ಗರೆನೇಡ್ ಸ್ಫೋಟಿಸಿ ತಪ್ಪಿಸಿಕೊಳ್ಳುವಂತೆ ಮಾಡುವುದು, ಕೇರಳಕ್ಕೆ ಕರೆದೊಯ್ದು ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಕಳುಹಿಸುವುದು, ನಂತರ ಬಾಂಗ್ಲಾದೇಶಕ್ಕೆ ಕಳುಹಿಸಲು ಯೋಜನೆ ಸಿದ್ಧ ಪಡಿಸಿಕೊಳ್ಳಲಾಗಿತ್ತು’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಪ್ರೇಯಸಿ ಹೆಸರಿನಲ್ಲಿ ಮೊಬೈಲ್ ಖರೀದಿ: ಶಂಕಿತ ನಾಗರಾಜ್, ತನ್ನ ಪ್ರೇಯಸಿ ಪವಿತ್ರಾ ಹೆಸರಿನಲ್ಲಿ ವಾರಕ್ಕೆ ಎರಡು ಮೊಬೈಲ್ ಖರೀದಿಸಿ, ಅವುಗಳನ್ನು ಜೈಲಿನಲ್ಲಿರುವ ಕೈದಿಗಳಿಗೆ ಪೂರೈಸಿದ್ದ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ಜತೆಗೆ ಮೂವರು ಶಂಕಿತರ ಪೈಕಿ ಫಾತಿಮಾ, ಚಾಂದ್ ಪಾಷಾ ಸಿಗ್ನಲ್ ಆ್ಯಪ್ ಮೂಲಕ ಮಾತನಾಡಿದ್ದಾರೆ. ಶಂಕಿತರ ಧ್ವನಿಯ ಮಾದರಿ ಸಂಗ್ರಹಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಆತ್ಮಹತ್ಯೆಗೆ ಫಾತಿಮಾ ಯತ್ನ:
ಶಂಕಿತರ ಪೈಕಿ ಅನೀಸ್ ಫಾತಿಮಾ ಎನ್‌ಐಎ ವಿಚಾರಣೆಗೆ ಅಸಹಕಾರ ತೋರಿದ್ದಾಳೆ. ಜೈಲಿನಲ್ಲಿದ್ದಾಗ ಶೌಚಾಲಯಕ್ಕೆ ಹೋಗಿ ಹಾರ್ಪಿಕ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ಎಂಟು ಮಂದಿ ಅರ್ಜಿ:
ಕಾರಾಗೃಹದಿಂದಲೇ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿರುವ ಎಲ್‌ಇಟಿ ಉಗ್ರ ಟಿ. ನಾಸಿರ್ ಸೇರಿ 8 ಮಂದಿ ಶಂಕಿತರು ತಪ್ಪೊಪ್ಪಿಗೆ ಹೇಳಿಕೆ ದಾಖಲಿಸುವುದಾಗಿ ಎನ್‌ಎಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯವು ಜುಲೈ 16ಕ್ಕೆ ವಿಚಾರಣೆ ಮುಂದೂಡಿದೆ. ಟಿ.ನಾಸಿರ್ ಸೈಯದ್ ಸುಹೈಲ್ ಮೊಹಮದ್ ಉಮರ್ ಜಹೀದ್ ತಬ್ರೇಜ್ ಸೈಯದ್ ಮುದಾಸಿರ್ ಪಾಷಾ ಮಹಮದ್ ಫೈಸಲ್ ಸಲ್ಮಾನ್ ಖಾನ್ ಮತ್ತು 2021ರಲ್ಲಿ ದೆಹಲಿಯ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾಗಿದ್ದ ವಿಕ್ರಮ್ ಕುಮಾರ್ ಅಲಿಯಾಸ್ ಛೋಟಾ ಉಸ್ಮಾನ್ ತಪ್ಪೊಪ್ಪಿಗೆ ಹೇಳಿಕೆ ನೀಡುವುದಾಗಿ ಜುಲೈ 8ರಂದು ಅರ್ಜಿ ಸಲ್ಲಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಿರುವುದಾಗಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.