ADVERTISEMENT

ವಿದ್ಯಾಸಾಗರ್ ಶಾಲೆ ಪ್ರಕರಣ: ಶಿಕ್ಷಕಿ ವಿರುದ್ಧದ ದೂರು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 21:06 IST
Last Updated 13 ಫೆಬ್ರುವರಿ 2022, 21:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಂದ್ರಾಲೇಔಟ್ ಬಳಿಯ ‘ವಿದ್ಯಾಸಾಗರ್ ಇಂಗ್ಲಿಷ್ ಪಬ್ಲಿಕ್‌ ಸ್ಕೂಲ್’ ಪ್ರಕರಣ ತಿರುವು ಪಡೆದುಕೊಂಡಿದ್ದು, ಪೋಷಕರಲ್ಲದ ವ್ಯಕ್ತಿಗಳು ಶಾಲೆ ಬಳಿ ಬಂದು ಗಲಾಟೆ ಮಾಡಿರುವುದಾಗಿ ಶಾಲೆ ಆಡಳಿತ ಮಂಡಳಿ ಆರೋಪಿಸಿದೆ.

ಶನಿವಾರ ನಡೆದ ಘಟನೆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಎಸ್‌. ರಾಜು, ‘ಪೋಷಕರಲ್ಲದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಣ್ಣ ವಿಚಾರವನ್ನು ಗೊಂದಲಗೀಡು ಮಾಡಿ ಗಾಳಿ ಸುದ್ದಿ ಹರಡಿಸಿ ಸಮಾಜದ ಸಾಮರಸ್ಯ ಹಾಳು ಮಾಡಲು ಯತ್ನಿಸಿದ್ದಾರೆ’ ಎಂದಿದ್ದಾರೆ.

‘22 ವರ್ಷಗಳ ಇತಿಹಾಸವಿರುವ ಶಾಲೆಯಲ್ಲಿ ಬಡ- ಮಧ್ಯಮ ಕುಟುಂಬದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಮವಸ್ತ್ರ, ಶೂ ಮತ್ತು ಪಠ್ಯಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ’ ಎಂದೂ ಹೇಳಿದ್ದಾರೆ.

ADVERTISEMENT

‘ಶಿಕ್ಷಕಿ ಶಶಿಕಲಾ ಮತ್ತು ವಿದ್ಯಾರ್ಥಿಗಳ ನಡುವೆ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆದಿತ್ತು. ಅದನ್ನು ತಪ್ಪಾಗಿ ಗ್ರಹಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಗೊಂದಲ ಸೃಷ್ಟಿಯಾಗಿ, ಗಲಾಟೆ ನಡೆಯಿತು’ ಎಂದಿದ್ದಾರೆ.

‘ಹಿಜಾಬ್ ಮತ್ತು ಧಾರ್ಮಿಕ ವಿಚಾರಗಳ ಬಗ್ಗೆ ಯಾವುದೇ ವಿಚಾರ ಪ್ರಸ್ತಾಪವಾಗಿಲ್ಲ. ಗಾಳಿ ಸುದ್ದಿ ಹರಡಿಸಿದ್ದ ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸಿ, ಹಲವರನ್ನು ಪ್ರಚೋದಿಸಿದರು. ಇದನ್ನು ಶಾಲಾ ಆಡಳಿತ ಮಂಡಳಿ ಖಂಡಿಸುತ್ತದೆ' ಎಂದು ಅವರು ತಿಳಿಸಿದ್ದಾರೆ.

ಅಮಾನತು ಹಿಂಪಡೆದ ಮಂಡಳಿ:
ಗಣಿತ ಶಿಕ್ಷಕಿ ಶಶಿಕಲಾ ಅವರನ್ನು ಅಮಾನತು ಮಾಡಿದ್ದ ತೀರ್ಮಾನವನ್ನು ಶಾಲಾ ಆಡಳಿತ ಮಂಡಳಿ ಹಿಂಪಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್. ರಾಜು, ‘ಶಿಕ್ಷಕಿ ಶಶಿಕಲಾ ಮೇಲಿನ ಆರೋಪದ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ತಪ್ಪಿತಸ್ಥರೆಂದು ಕಂಡುಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಪೊಲೀಸರಿಂದ ದೂರು ಪರಿಶೀಲನೆ

‘ಅವಾಚ್ಯ ಶಬ್ದಗಳನ್ನು ಬಳಸಿ ವಿದ್ಯಾರ್ಥಿಗಳು ಹಾಗೂ ಮುಸ್ಲಿಂ ಸಮುದಾಯವನ್ನು ನಿಂದಿಸಿರುವ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂಬುದಾಗಿ ವಿದ್ಯಾರ್ಥಿನಿಯೊಬ್ಬರು ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

ಪರಿಶೀಲನೆ ನಡೆಸುತ್ತಿರುವ ಪೊಲೀಸರು, ‘ದೂರಿನ ಸಂಗತಿಗಳಿಗೆ ಪುರಾವೆಗಳು ಸಿಕ್ಕಿಲ್ಲ. ಎಫ್‌ಐಆರ್ ದಾಖಲು ಸಂಬಂಧ ಪರಿಶೀಲನೆ ನಡೆಯುತ್ತಿದೆ’ ಎಂದಿದ್ದಾರೆ.

‘ಸೋಮವಾರ ಶಾಲೆ ಆರಂಭವಾಗಲಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.