ADVERTISEMENT

ಬೆಂಗಳೂರು | ಮೂಳೆ ಕ್ಯಾನ್ಸರ್‌: ಕಾಲು ತೆಗೆಯದೆ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 14:38 IST
Last Updated 2 ಸೆಪ್ಟೆಂಬರ್ 2025, 14:38 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಅಪರೂಪದ ‘ಆಸ್ಟಿಯೊಸಾರ್ಕೊಮಾ’ ಎಂಬ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಐದು ವರ್ಷದ ಮಗುವಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

‘ರೊಟೇಶನ್‌ಪ್ಲಾಸ್ಟಿ’ ಎಂಬ ಶಸ್ತ್ರಚಿಕಿತ್ಸೆ ವಿಧಾನ ಅನುಸರಿಸಲಾಗಿದೆ. ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಬರುವ ಮೊದಲು ಈ ಮಗು ಕಿಮೋಥೆರಪಿಗೆ ಒಳಗಾಗಿತ್ತು. ವಿವಿಧ ಆಸ್ಪತ್ರೆಗಳು ‘ಹಿಪ್ ಡಿಸ್‌ಆರ್ಟಿಕುಲೇಷನ್’ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದ್ದವು. ಈ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ರೋಗಿಯ ಕ್ಯಾನ್ಸರ್ ಬಾಧಿತ ಕಾಲನ್ನು ಸಂಪೂರ್ಣ ತೆಗೆಯಲಾಗುತ್ತದೆ. ಇದರಿಂದ ಅಂಗವಿಕಲವಾಗುವ ಜತೆಗೆ, ಸೊಂಟಕ್ಕೆ ಕೃತಕ ಕಾಲನ್ನು ಅಳವಡಿಸಬೇಕಾಗುತ್ತದೆ. ಆದ್ದರಿಂದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ವೈದ್ಯರು ‘ರೊಟೇಶನ್‌ಪ್ಲಾಸ್ಟಿ’ ಶಸ್ತ್ರಚಿಕಿತ್ಸೆ ವಿಧಾನ ಅನುಸರಿಸಿದರು ಎಂದು ಆಸ್ಪತ್ರೆ ತಿಳಿಸಿದೆ. 

ADVERTISEMENT

‘ಈ ಶಸ್ತ್ರಚಿಕಿತ್ಸೆ ಸಂಕೀರ್ಣವಾಗಿದ್ದು, ತೊಡೆಯ ಭಾಗ ಮತ್ತು ಮಂಡಿಯನ್ನು ಈ ವಿಧಾನದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಮಂಡಿ ಕೆಳಗಿನ ಭಾಗಕ್ಕೆ ಮಾತ್ರ ಕೃತಕ ಅಂಗಾಂಶ ಜೋಡಿಸುವ ಅಗತ್ಯವಿರುತ್ತದೆ. ಇದು ಇತರ ಆಯ್ಕೆಗಳಿಗೆ ಹೋಲಿಸಿದರೆ ರೋಗಿಗಳಿಗೆ ಕೊಂಚ ಅನುಕೂಲಕರವಾಗಿದೆ. ಹಾಗಾಗಿ, ಈ ಶಸ್ತ್ರಚಿಕಿತ್ಸೆಯನ್ನು ನಡೆಸುವ ನಿರ್ಧಾರ ತೆಗೆದುಕೊಂಡೆವು. ‘ರೊಟೇಶನ್‌ಪ್ಲಾಸ್ಟಿ’ ಶಸ್ತ್ರಚಿಕಿತ್ಸೆಯಿಂದ ಮಗುವಿನ ಸೊಂಟ ಮತ್ತು ಮಂಡಿಯನ್ನು ಉಳಿಸಲು ಸಾಧ್ಯವಾಯಿತು’ ಎಂದು ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಸುಮನ್ ಬೈರೇಗೌಡ ಹೇಳಿದ್ದಾರೆ.

‘ಈ ಶಸ್ತ್ರಚಿಕಿತ್ಸೆ ನಡೆಸಲು ಸುಮಾರು 8 ಗಂಟೆ ಬೇಕಾಯಿತು. ಸಹಾಯಕರ ನೆರವಿಲ್ಲದೆ ಮಗು ಜೀವನ ಸಾಗಿಸಲು ಸಾಧ್ಯವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.