ADVERTISEMENT

ಬೆಂಗಳೂರು | ನಗರ ಪಾಲಿಕೆಗಳಿಗೆ 700 ನಾಮನಿರ್ದೇಶಿತ ಸದಸ್ಯರು

ಐದೂ ನಗರ ಪಾಲಿಕೆಗಳಲ್ಲಿ ಪ್ರತಿ 20 ಸಾವಿರ ಜನರಿಗೊಬ್ಬ ಮತದಾನ ಹಕ್ಕಿಲ್ಲದ ಸದಸ್ಯ

ಆರ್. ಮಂಜುನಾಥ್
Published 14 ಡಿಸೆಂಬರ್ 2025, 0:00 IST
Last Updated 14 ಡಿಸೆಂಬರ್ 2025, 0:00 IST
ಪದ್ಮನಾಭರೆಡ್ಡಿ
ಪದ್ಮನಾಭರೆಡ್ಡಿ   

ಬೆಂಗಳೂರು: ನಗರ ಪಾಲಿಕೆಗಳ ಚುನಾವಣೆಯ ಅನಿಶ್ಚಿತತೆಯಲ್ಲಿರುವ ಸಂದರ್ಭದಲ್ಲಿ ಐದೂ ನಗರ ಪಾಲಿಕೆಗಳಿಗೆ 700ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ.

ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದು ಐದು ವರ್ಷ ಚುನಾವಣೆ ನಡೆಸಿರಲಿಲ್ಲ. 2025ರ ಸೆಪ್ಟೆಂಬರ್‌ 2ರಂದು ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು, ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರಂತೆ  ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಸ್ತಿತ್ವಕ್ಕೆ ಬಂದಿತು. ಅದೇ ದಿನ ಐದು ನಗರ ಪಾಲಿಕೆಗಳೂ ರಚನೆಯಾದವು. 

ಐದೂ ನಗರ ಪಾಲಿಕೆಗಳಿಗೆ ವಾರ್ಡ್‌ಗಳ ಮರುವಿಂಗಡಣೆ ಅಂತಿಮವಾಗಿದ್ದರೂ, ಇನ್ನೂ ಮೀಸಲಾತಿಯನ್ನು ನಿಗದಿ ಮಾಡಿಲ್ಲ. ಈ ಸಂದರ್ಭದಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಗೆ ತಿದ್ದುಪಡಿ ತಂದು, ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೂ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಮುಂದಾಗಿದೆ. ಇದರಿಂದ, ಒಟ್ಟಾರೆ ಚುನಾಯಿತ ಕಾರ್ಪೊರೇಟರ್‌ಗಳಿಗಿಂತ 200ಕ್ಕೂ ಹೆಚ್ಚು ನಾಮ ನಿರ್ದೇಶಿತ ಕಾರ್ಪೊರೇಟರ್‌ಗಳೇ ಇರಲಿದ್ದಾರೆ.

ADVERTISEMENT

ಬಿಬಿಎಂಪಿಯ ಅವಧಿಯಲ್ಲಿ 198 ಚುನಾಯಿತ ಕಾರ್ಪೊರೇಟರ್‌ಗಳಿದ್ದರೆ, 20 ನಾಮ ನಿರ್ದೇಶಿತ ಸದಸ್ಯರಿದ್ದರು.

ಬೆಳಗಾವಿಯ ಸುವರ್ಣ ವಿಧಾನಸೌಭದಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಮಸೂದೆಯನ್ನು ಡಿ.12ರಂದು ಮಂಡಿಸಲಾಗಿದೆ. ಚುನಾಯಿತ ಸದಸ್ಯರಿಲ್ಲದ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲು ಹೊರಟಿರುವುದು ಸಂವಿಧಾನ ವಿರೋಧಿ ಎಂಬ ಆರೋಪ ವ್ಯಕ್ತವಾಗಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯ ಪ್ರಕರಣ 30ಕ್ಕೆ ತಿದ್ದುಪಡಿ ತಂದು, ಐದನೇ ಅಂಶವನ್ನು ಸೇರಿಸಲು ಮಸೂದೆ ಮಂಡಿಸಲಾಗಿದೆ. ‘ಗ್ರೇಟರ್‌ ಬೆಂಗಳೂರು ಪ್ರದೇಶಕ್ಕೆ ಸೇರಿದಂಥ ಸ್ಥಳೀಯ ಪ್ರದೇಶದಲ್ಲಿ ಸಾಮಾನ್ಯ ನಿವಾಸಿಯನ್ನು ಆ ಸ್ಥಳೀಯ ಪ್ರದೇಶಕ್ಕೆ ಚುನಾವಣೆ ನಡೆಸುವವರೆಗೆ ಪ್ರತಿ 20 ಸಾವಿರ ಜನಸಂಖ್ಯೆಗೆ ಕನಿಷ್ಠ ಒಬ್ಬ ವ್ಯಕ್ತಿಯಂತೆ ಆ ನಿರ್ದಿಷ್ಟ ನಗರ ಪಾಲಿಕೆಗೆ ಹೆಚ್ಚುವರಿ ಸದಸ್ಯನಾಗಿ ನಾಮ ನಿರ್ದೇಶಿಸತಕ್ಕದ್ದು’. ‘ಅಂಥ ನಾಮ ನಿರ್ದೇಶಿತ ವ್ಯಕ್ತಿಯು ನಗರ ಪಾಲಿಕೆಯಲ್ಲಿ ಮತದಾನ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ’ ಎಂದು ತಿದ್ದುಪಡಿ ತರುವ ಅಂಶಗಳಲ್ಲಿ ಹೇಳಲಾಗಿದೆ.

ಐದು ನಗರ ಪಾಲಿಕೆಗಳಲ್ಲಿ 369 ವಾರ್ಡ್‌ಗಳನ್ನು ಅಂತಿಮಗೊಳಿಸಿ ನವೆಂಬರ್‌ 19ರಂದು ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದಾದ ನಂತರವೂ, 20 ವಾರ್ಡ್‌ಗಳ ಗಡಿ ಮತ್ತು ಹೆಸರು ಬದಲಾಯಿಸಿ ಅಧಿಸೂಚಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರುವರಿಯಲ್ಲಿ ಚುನಾವಣೆ ನಡೆಸುವುದಾಗಿ ಹೇಳಲಾಗುತ್ತದೆ. ಆದರೆ, ಇದೀಗ ಕಾಯ್ದೆಗೆ ತಿದ್ದುಪಡಿ ತಂದು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಸರ್ಕಾರದ ಪ್ರಕ್ರಿಯೆಯಿಂದ ಚುನಾವಣೆ ಸದ್ಯಕ್ಕೆ ನಡೆಯುವುದಿಲ್ಲ ಎಂಬ ಸಂಶಯ ಮೂಡಿದೆ.

ನಗರದ ಸುತ್ತಲಿನ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಕೆಲವು ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಸೇರಿಸಿಕೊಳ್ಳಬೇಕೆಂಬ ಉದ್ದೇಶ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗಿದೆ. ಜನಪ್ರತಿನಿಧಿಗಳೂ ಅದನ್ನೇ ಬಯಸುತ್ತಿದ್ದಾರೆ. ಆ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಅವಧಿ ಈಗಾಗಲೇ ಬಹುತೇಕ ಮುಗಿದಿದ್ದು, ಯಾವ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದೆಯೋ ಅವುಗಳನ್ನು ಜಿಬಿಎಗೆ ಸೇರಿಸಿಕೊಳ್ಳುವ ನಿರೀಕ್ಷೆ ಇದೆ. 

ಹೊಸ ಪ್ರದೇಶಗಳು ಸೇರಿಕೊಂಡರೆ ಮೂರು ತಿಂಗಳಲ್ಲಿ ಅವುಗಳ ವಾರ್ಡ್‌ಗಳನ್ನು ಮರು ವಿಂಗಡಿಸಿ, ನಗರ ಪಾಲಿಕೆಗಳಿಗೆ ಸೇರಿಸಬೇಕು. ಅಂದರೆ, ಮೂರು ತಿಂಗಳು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳೂ ನಡೆಯುವುದಿಲ್ಲ. ನಗರ ಪಾಲಿಕೆಗಳ ಚುನಾವಣೆ ಇನ್ನಾರು ತಿಂಗಳು ಮುಂದಕ್ಕೆ ಹೋದದಂತಾಗುತ್ತದೆ ಎಂದು ಹೇಳಲಾಗಿದೆ.

ಪಾಲಿಕೆ ಸದಸ್ಯರಾಗುವ ಆಕಾಂಕ್ಷೆ ಹೊಂದಿರುವವರನ್ನು ತಕ್ಷಣಕ್ಕೆ ಸಮಾಧಾನಪಡಿಸಲು ನಾಮನಿರ್ದೇಶನದ ಅಸ್ತ್ರ ಉಪಯೋಗಿಸಲಾಗುತ್ತಿದೆ
ಪದ್ಮನಾಭ ರೆಡ್ಡಿ, ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ

ಸಂವಿಧಾನ ಬಾಹಿರ: ಪದ್ಮನಾಭ ರೆಡ್ಡಿ

‘ಪ್ರತಿ 20 ಸಾವಿರ ಜನಸಂಖ್ಯೆಗೆ 600ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಹೊರಟಿರುವುದು ಸಂವಿಧಾನಕ್ಕೆ ವಿರುದ್ಧವಾದುದು. ಕಡ್ಡಾಯ ಚುನಾವಣೆಗಳನ್ನು ನಡೆಸುವ ಬದಲು ಎಲ್ಲ ವಾರ್ಡ್‌ಗಳಿಗೆ ಕಾರ್ಪೊರೇಟರ್‌ಗಳನ್ನು ನಾಮ ನಿರ್ದೇಶನ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದು ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳಿದರು. ‘74ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ 1992 (ಭಾಗ 11ಎ)ದಿಂದ ಸ್ಥಾಪಿಸಲಾದ ಪುರಸಭೆಗಳನ್ನು ನಿಯಂತ್ರಿಸುವ ಮೂಲಭೂತ ತತ್ವ ಎಂದರೆ ಎಲ್ಲ ವಾರ್ಡ್‌ ಪ್ರತಿನಿಧಿಗಳಿಗೆ ನೇರ ಚುನಾವಣೆ ನಡೆಸುವುದು.  ಆರ್ಟಿಕಲ್‌ 243ಆರ್ (1) ಇದನ್ನು ಸ್ಪಷ್ಟವಾಗಿ ಹೇಳುತ್ತದೆ. ನಗರ ಪಾಲಿಕೆಗಳಿಗೆ ಚುನಾವಣೆವರೆಗೆ ನಾಮನಿರ್ದೇಶನ ಸದಸ್ಯರನ್ನು ಮಾಡುವುದು ಸಂವಿಧಾನದ ಆಶಯವನ್ನೇ ಬೈಪಾಸ್‌ ಮಾಡಿದಂತಾಗುತ್ತದೆ. ಇದು ಪ್ರಜಾಪ್ರಭುತ್ವದ ಪ್ರಮುಖ ರಚನೆಯನ್ನು ನೇರವಾಗಿ ವಿರೋಧಿಸುತ್ತದೆ’ ಎಂದರು. ‘ನಗರ ಪಾಲಿಕೆಗಳ ಹೊಸ ವಾರ್ಡ್‌ಗಳಿಗೆ ಚುನಾವಣೆ ಮಾಡದೆ ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಯಾವುದೇ ಅವಕಾಶ ಇಲ್ಲದಿದ್ದರೂ ಕಾಯ್ದೆ ತಿದ್ದುಪಡಿ ಮಾಡಿ ಅದನ್ನು ಮಾಡಲು ಹೊರಟಿರುವುದು ಸಂವಿಧಾನ 74ನೇ ತಿದ್ದುಪಡಿಯ ಉಲ್ಲಂಘನೆಯಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ತಿದ್ದುಪಡಿ ಮಸೂದೆಯನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.