ADVERTISEMENT

ವಾರದಲ್ಲಿ ಬೆಂಗಳೂರು ನಗರದ ರಸ್ತೆಗಳು ಗುಂಡಿ ಮುಕ್ತ: ತುಷಾರ್ ಗಿರಿನಾಥ್ ಭರವಸೆ

ಮೇ ತಿಂಗಳಲ್ಲಿ ಮಳೆಯಾದ್ದರಿಂದ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 1:55 IST
Last Updated 2 ಜೂನ್ 2022, 1:55 IST
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್   

ಬೆಂಗಳೂರು: ‘ನಗರದ ರಸ್ತೆಗಳನ್ನು ಜೂನ್‌ 6ರೊಳಗೆ ಗುಂಡಿ ಮುಕ್ತ ಮಾಡಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

‘ಮೇ ತಿಂಗಳಿನಲ್ಲಿ ಮಳೆ ಹೆಚ್ಚಾಗಿದ್ದರಿಂದ 25 ದಿನಗಳಿಂದ ರಸ್ತೆ ಗುಂಡಿ ಮುಚ್ಚುವ ಕೆಲಸ ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಿಸಲಾಗಿದೆ. ಬಾಕಿ 5,500 ಗುಂಡಿಗಳನ್ನು ವೇಗವಾಗಿ ಮುಚ್ಚಲಾಗುತ್ತಿದೆ’ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಒಂದು ಚದರ ಮೀಟರ್ ಗುಂಡಿ ಇದೆ ಎಂದುಕೊಂಡು ಸ್ಥಳಕ್ಕೆ ಹೋದಾಗ ಕೆಲವೆಡೆ ಐದು ಚದರ ಮೀಟರ್‌ನಷ್ಟು ಅಗಲ ಇರುವ ಗುಂಡಿಗಳೂ ಸಿಕ್ಕಿವೆ. ದಿನಕ್ಕೆ 60 ಲಾರಿ ಲೋಡ್‌ ಬಿಸಿ ಡಾಂಬರ್‌ ಮಿಶ್ರಿತ ಜಲ್ಲಿ ಖರ್ಚಾಗುವ ಜಾಗದಲ್ಲಿ 250 ಲಾರಿ ಲೋಡ್‌ ಬೇಕಾಗುತ್ತಿದೆ. ಆದ್ದರಿಂದ ಸ್ವಲ್ಪ ವಿಳಂಬವಾಗುತ್ತಿದೆ.ಗುಂಡಿ ಮುಚ್ಚಲು ಕಚ್ಚಾ ವಸ್ತುಗಳ ಕೊರತೆ ಇದೆ ಎಂಬುದು ಸುಳ್ಳು’ ಎಂದು ಹೇಳಿದರು.

ADVERTISEMENT

ತನಿಖೆಗೆ ಆದೇಶ: ‘ರಸ್ತೆ ಗುಂಡಿ ಮುಚ್ಚಲು ಪೈಥಾನ್ ಯಂತ್ರ ಪೂರೈಸಿ
ರುವ ಅಮೆರಿಕ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್‌(ಎಆರ್‌ಟಿಸಿ) ಕಂಪನಿಯು ಬಿಬಿಎಂಪಿ ಮುಖ್ಯ ಎಂಜಿನಿಯರ್‌(ರಸ್ತೆ ಮೂಲಸೌಕರ್ಯ) ಬಿ.ಎಸ್. ಪ್ರಹ್ಲಾದ್ ವಿರುದ್ಧ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿರುವ ಪಾಲಿಕೆ ವಿಶೇಷ ಆಯುಕ್ತ(ಯೋಜನೆ) ಎನ್‌.ಬಿ. ರವೀಂದ್ರ ಅವರಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ವರದಿ ನೀಡಿದ ಕೂಡಲೇ ಹೈಕೋರ್ಟ್‌ಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಹಳೇ ಬಿಲ್ ಪಾವತಿ ಮತ್ತು ಹೊಸ ಕೆಲಸಕ್ಕೆ ದರ ಹೆಚ್ಚಳ ಮಾಡಬೇಕು ಎಂಬುದು ಎಆರ್‌ಟಿಸಿ ಬೇಡಿಕೆ. ಈ ಸಂಬಂಧ ಪ್ರಹ್ಲಾದ್ ಅವರು ಹಲವು ಬಾರಿ ಸಭೆ ನಡೆಸಿದ್ದರು. ಅವರ ವಿರು
ದ್ಧವೇ ದೂರು ನೀಡಿರುವುದರಿಂದ ಬಾಕಿ ಬಿಲ್ ಪಾವತಿ ಪ್ರಕ್ರಿಯೆ ಮುಂದುವ
ರಿಸುವ ಜವಾಬ್ದಾರಿಯನ್ನು ಮುಖ್ಯ ಎಂಜಿನಿಯರ್‌(ಯೋಜನೆ) ಎಂ. ಲೋಕೇಶ್‌ಗೆ
ನೀಡಲಾಗಿದೆ’ ಎಂದು ವಿವರಿಸಿದರು.

ರಾಜಕಾಲುವೆಗಳಲ್ಲಿ ಒಳಚರಂಡಿ ಅಥವಾ ಇನ್ನಿತರ ಕಾಮಗಾರಿಗಳನ್ನು ಮಳೆಗಾಲದಲ್ಲಿ ನಿರ್ವಹಿಸಿದರೆ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಲಿದೆ. ಆದ್ದರಿಂದ ಯಾವುದೇ ಕಾಮಗಾರಿಯನ್ನು ಈಗ ಕೈಗೊಳ್ಳದಂತೆ ಜಲಮಂಡಳಿಗೆ ತಿಳಿಸಲಾಗಿದೆ. ಪ್ರಗತಿ
ಯಲ್ಲಿರುವ ಕಾಮಗಾರಿ ಪೂರ್ಣಗೊಳಿಸಿ ರಾಜಕಾಲುವೆಯಲ್ಲಿ ಇರುವ ಯಂತ್ರಗ
ಳನ್ನು ಹೊರಕ್ಕೆ ತೆಗೆಯಲು ಜೂನ್ 1ರ ತನಕ ಸಮಯ ನೀಡಲಾಗಿತ್ತು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಲ್ಸೇತುವೆಗಳ ನಿರ್ವಹಣೆ: ನಗರದ ಮೇಲ್ಸೇತುವೆಗಳ ನಿರ್ವಹಣೆ ಕುಂಠಿತ ಆಗಿರುವುದು ಗಮನಕ್ಕೆ ಬಂದಿದೆ. ಈ ವರ್ಷ ಅಮೃತ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ನಿರ್ವಹಣೆ ಮಾಡಲಾಗುವುದು. ಪ್ರತಿವರ್ಷ ಈ ಅನುದಾನ ಇರುವುದಿಲ್ಲ. ಆದ್ದರಿಂದ ಮುಂದಿನ ವರ್ಷದಿಂದ ಮೇಲ್ಸೇತುವೆಗಳ ನಿರ್ವಹಣೆಗೆ ಅನುದಾನ ಮೀಸಲಿಡಲಾಗುವುದು ಎಂದು ತಿಳಿಸಿದರು.

ವಲಯ ಕಚೇರಿಗಳಲ್ಲೇ ಆಯುಕ್ತರು ಲಭ್ಯ

‘ಬಿಬಿಎಂಪಿ ವಲಯ ಕಚೇರಿಗಳಲ್ಲಿ ಮುಂದಿನ ವಾರದಿಂದ ವಲಯ ಆಯುಕ್ತರು ಕುಳಿತುಕೊಳ್ಳಲಿದ್ದು, ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಬಿಬಿಎಂಪಿ ಕೇಂದ್ರ ಕಚೇರಿಗೆ ಬರುವುದು ತಪ್ಪಲಿದೆ’ ಎಂದು ತುಷಾರ್ ಗಿರಿನಾಥ್ ಹೇಳಿದರು.

‘ವಲಯ ಕಚೇರಿಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸ್ವಂತ ಕಚೇರಿ ಇಲ್ಲದಿದ್ದರೆ ಬಾಡಿಗೆ ಪಡೆಯಲು ಅವಕಾಶ ನೀಡಲಾಗುವುದು. ಆಯಾ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಲಯ ಕಚೇರಿಗಳಲ್ಲೇ ಆಯುಕ್ತರು ಸಭೆ ನಡೆಸಲಿದ್ದಾರೆ. ಐಎಎಸ್‌ ಅಧಿಕಾರಿಯೊಬ್ಬರು ವಲಯ ಕಚೇರಿಯಲ್ಲಿ ಸಿಗಲಿದ್ದಾರೆ ಎಂಬುದು ಜನರಿಗೆ ಗೊತ್ತಾದರೆ ಅಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ’ ಎಂದರು.

ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಕರಡು ಬಹುತೇಕ ಸಿದ್ಧವಿದ್ದು, ಎರಡು– ಮೂರು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

2011ರ ಜನಗಣತಿ ಪ್ರಕಾರ 84.65 ಲಕ್ಷ ಮತದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ಅದನ್ನು ಆಧರಿಸಿ 243 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಾರ್ಡ್‌ಗೆ ಸರಾಸರಿ 34,750 ಮತದಾರರು ಇರಲಿದ್ದಾರೆ. ರೈಲು ಹಳಿ, ರಸ್ತೆಗಳ ವಿಭಜನೆ ಆಗುವ ಕಡೆ ಶೇ 10ರಷ್ಟು ಕಡಿಮೆ ಅಥವಾ ಹೆಚ್ಚು ಆಗಲಿದೆ ಎಂದರು.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕರಡು ಸಿದ್ಧವಾಗಿದ್ದು, ಒಂದು ಸಾವಿರ ಪುಟಕ್ಕೂ ಅಧಿಕ ಇದೆ. ಆದ್ದರಿಂದ ಸಂಕ್ಷಿಪ್ತಗೊಳಿಸಿ ಸಲ್ಲಿಕೆಯಾಗಿದೆ. ಸುಪ್ರೀಂ ಕೋರ್ಟ್‌ ನೀಡಿರುವ ಸಮಯದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ವಾರ್ಡ್‌ ವಾರು ಮೀಸಲಾತಿ ವಿಷಯದಲ್ಲಿ ಬಿಬಿಎಂಪಿ ಪಾತ್ರ ಇರುವುದಿಲ್ಲ. 1992ರಿಂದ ಈವರೆಗೆ ವಾರ್ಡ್‌ಗಳನ್ನು ಪ್ರತಿನಿಧಿಸಿರುವ ಪಾಲಿಕೆ ಸದಸ್ಯರಿಗೆ ಸಂಬಂಧಿಸಿದ ವಿವರವನ್ನು ಸರ್ಕಾರ ಕೇಳಿತ್ತು. ಅದನ್ನು ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.