ADVERTISEMENT

ಬೆಂಗಳೂರು | ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ: ವ್ಯಾಪಾರಿಗಳ ದೂರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 18:34 IST
Last Updated 15 ಸೆಪ್ಟೆಂಬರ್ 2025, 18:34 IST
ಯಶವಂತಪುರ ಎಪಿಎಂಸಿ ಯಾರ್ಡ್ ಪಕ್ಕದ ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯಸುರಿಯಲಾಗಿದೆ --- –ಪ್ರಜಾವಾಣಿ ಚಿತ್ರ
ಯಶವಂತಪುರ ಎಪಿಎಂಸಿ ಯಾರ್ಡ್ ಪಕ್ಕದ ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯಸುರಿಯಲಾಗಿದೆ --- –ಪ್ರಜಾವಾಣಿ ಚಿತ್ರ   

ಬೆಂಗಳೂರು: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಹೊಂದಿಕೊಂಡಿರುವ ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಇಡೀ ಪ್ರದೇಶಕ್ಕೆ ದೂಳಿನ ಮಜ್ಜನವಾಗುತ್ತಿದೆ. ಇದರ ಪಕ್ಕದಲ್ಲಿ ದಿನಬಳಕೆ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳಿದ್ದು, ವರ್ತಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕಿರಾಣಾ ಕಾಂಪ್ಲೆಕ್ಸ್‌ ವ್ಯಾಪಾರಿಗಳು ದೂರಿದರು. 

‘ನಿತ್ಯ ಹತ್ತಾರು ಲೋಡ್‌ ಕಟ್ಟಡ ತ್ಯಾಜ್ಯವನ್ನು ಟ್ರಾಕ್ಟರ್‌ಗಳ ಮೂಲಕ ತೆಗೆದುಕೊಂಡು ಬಂದು ಇಲ್ಲಿ ಸಂಗ್ರಹಿಸಲಾಗುತ್ತಿದೆ. ಈ ತ್ಯಾಜ್ಯದಲ್ಲಿ ಇರುವ ಕಬ್ಬಿಣ ಸೇರಿದಂತೆ ಇತರೆ ವಸ್ತುಗಳನ್ನು ಬೇರೆ ಬೇರೆ ಮಾಡಿ, ಜೆಸಿಬಿಯ ಮೂಲಕ ಉಳಿದ ತ್ಯಾಜ್ಯವನ್ನು ಬೇರೆ ಕಡೆಗೆ ಸಾಗಿಸಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಆಗುತ್ತಿದ್ದು, ಎಪಿಎಂಸಿ ಯಾರ್ಡ್‌ ಒಳಗಡೆ ಹೋಗಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಕಿರಾಣಾ‌ ಕಾಂಪ್ಲೆಕ್ಸ್‌ನ ವ್ಯಾಪಾರಿಗಳಾದ ನಾಗರಾಜ್ ಕಿಣಿ, ನಾಗರಾಜ್ ಹೇಳಿದರು. 

‘ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡದಂತೆ ಹಲವಾರು ಬಾರಿ ಹೇಳಿದ್ದೇವೆ. ಈ ಬಗ್ಗೆ ನಿವೇಶನದ ಮಾಲೀಕರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಎಪಿಎಂಸಿ ಆವರಣದಲ್ಲಿರುವ  ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ನಮ್ಮ ಮನವಿಗೆ ಸ್ಪಂದಿಸಿ, ನಿವೇಶನದ ಮಾಲೀಕರಿಗೆ ಇಲ್ಲಿ ಕಟ್ಟಡ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.