ADVERTISEMENT

ಬೆಂಗಳೂರು: ಸುತ್ತಿಗೆಯಿಂದ ಹೊಡೆದು ಗಾರೆ ಕೆಲಸಗಾರನ ಕೊಲೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 14:26 IST
Last Updated 30 ಡಿಸೆಂಬರ್ 2025, 14:26 IST
   

ಬೆಂಗಳೂರು: ಜೆ.ಪಿ. ನಗರದ 8ನೇ ಹಂತದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮದ್ಯದ ಅಮಲಿನಲ್ಲಿ ಗಾರೆ ಕೆಲಸಗಾರರ ನಡುವೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ.

ಪಶ್ಚಿಮ ಬಂಗಾಳದ ಭಗೀರಥ್‌ ಬಾಪರಿ (30) ಕೊಲೆ ಆದವರು. ಕೃತ್ಯ ಎಸಗಿದ ಬಿಪ್ಲಬ್‌ ಮಂಡಲ್‌(27) ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಜೆ.ಪಿ. ನಗರದ ದೀಪಕ್‌ ಲೇಔಟ್‌ನ 2ನೇ ಬ್ಲಾಕ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಗಾರೆ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಇಬ್ಬರೂ ಮದ್ಯ ಸೇವಿಸಿ, ಕಟ್ಟಡಕ್ಕೆ ಬಂದಿದ್ದರು. ಆಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿದ್ದರಿಂದ ಭಗೀರಥ್‌ ಬಾಪರಿ ಅವರಿಗೆ ಸುತ್ತಿಗೆಯಿಂದ ಬಿಪ್ಲಬ್‌ ಮಂಡಲ್‌ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಸ್ಥಳದಲ್ಲೇ ಕುಸಿದು ಬಿದ್ದು, ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ADVERTISEMENT

ಇದಕ್ಕೂ ಮೊದಲು ಇಬ್ಬರೂ ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ನಗರಕ್ಕೆ ಬಂದು ಗಾರೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಮಂಗಳವಾರ ಬೆಳಿಗ್ಗೆ ಇತರೆ ಕಾರ್ಮಿಕರು ಕೆಲಸಕ್ಕೆ ಬಂದಾಗ ಕೃತ್ಯ ನಡೆದಿರುವುದು ಗೊತ್ತಾಗಿದೆ. ಕಾರ್ಮಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು ಎಂದು ಪೊಲೀಸರು ಹೇಳಿದರು.

ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.