ADVERTISEMENT

ಕೆಚ್ಚಲು ಕೊಯ್ದ ಪ್ರಕರಣ | ಮಾನಸಿಕ ಅಸ್ವಸ್ಥ ಕೃತ್ಯ ಎಸಗಲು ಸಾಧ್ಯವೇ: ಮಾಲೀಕ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 16:26 IST
Last Updated 13 ಜನವರಿ 2025, 16:26 IST
<div class="paragraphs"><p>ಶೇಖ ನಸ್ರೂ </p></div>

ಶೇಖ ನಸ್ರೂ

   

ಬೆಂಗಳೂರು: ‘ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಬಂಧಿತ ಆರೋಪಿ ಮಾನಸಿಕ ಅಸ್ವಸ್ಥನೆಂದು ಹೇಳುತ್ತಿದ್ದಾರೆ. ಮಾನಸಿಕ ಅಸ್ವಸ್ಥ ಈ ರೀತಿ ಕೃತ್ಯ ಎಸಗಲು ಸಾಧ್ಯವೇ’ ಎಂದು ಹಸುಗಳ ಮಾಲೀಕ, ದೂರುದಾರ ಜಿ.ಕರ್ಣ ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಬ್ಯಾಗ್ ಅಂಗಡಿ ಮಾಲೀಕರಿಗೆ ಹಸುಗಳಿಂದ ತೊಂದರೆ ಆಗುತ್ತಿತ್ತೇ? ಆರೋಪಿ ಎಷ್ಟು ವರ್ಷದಿಂದ ಬ್ಯಾಗ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಮಾಲೀಕರೇ ಬಹಿರಂಗ ಪಡಿಸಬೇಕು. ಆರೋಪಿಯ ಹಿಂದಿರುವ ವ್ಯಕ್ತಿಯನ್ನೂ ಬಂಧಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಶನಿವಾರ ಮುಂಜಾನೆ ಘಟನೆ ಆಗಿದ್ದು ಮದ್ಯದ ನಶೆಯಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆ ವೇಳೆಯಲ್ಲಿ ಮದ್ಯದಂಗಡಿ ತೆರೆದಿರುತ್ತದೆಯೇ? ಆರೋಪಿಯನ್ನು ತರಾತುರಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದೂ ಬಯಲಾಗಬೇಕು’ ಎಂದು ಒತ್ತಾಯಿಸಿದರು.

‘ಚಾಮರಾಜಪೇಟೆಯ ಪಶು ಆಸ್ಪತ್ರೆಯನ್ನು ಬಂದ್ ಮಾಡಿಸಲು ಕೆಲವರು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ನಾನು, ಸುತ್ತಮುತ್ತಲಿನ ಹಸುಗಳ ಮಾಲೀಕರು ಹಸುಗಳೊಂದಿಗೆ ತೆರಳಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದವು. ಆ ಸೇಡಿಗಾಗಿ ಕೃತ್ಯ ಎಸಗಲಾಗಿದೆ’ ಎಂದೂ ಕರ್ಣ ಆರೋಪಿಸಿದರು.

ಮಾಹಿತಿ ನೀಡಿದ್ದ ಪಕ್ಕದ ಮನೆ ವ್ಯಕ್ತಿ: ‘ಜೀವನ ನಿರ್ವಹಣೆಗಾಗಿ ಎಂಟು ಹಸುಗಳನ್ನು ಸಾಕಿದ್ದೇನೆ. ಹಾಲು ವ್ಯಾಪಾರ ಮಾಡುತ್ತೇನೆ. ನಾಲ್ಕು ಹಸುಗಳನ್ನು ಮನೆಯ ಪಕ್ಕದಲ್ಲೇ ಕಟ್ಟಿಕೊಳ್ಳುತ್ತೇನೆ. ಜಾಗವಿಲ್ಲದ ಕಾರಣಕ್ಕೆ ಉಳಿದ ನಾಲ್ಕು ಹಸುಗಳನ್ನು ದಂಡುಮಾರಿಯಮ್ಮ ದೇವಸ್ಥಾನದ ಹಿಂಭಾಗದಲ್ಲಿ ಕಟ್ಟುತ್ತೇನೆ. ಶನಿವಾರ ರಾತ್ರಿ ಹಸುಗಳಿಗೆ ಮೇವು ನೀಡಿ, ಮನೆಗೆ ಬಂದಿದ್ದೆ. ಭಾನುವಾರ ಮುಂಜಾನೆ 4.30ರ ಸುಮಾರಿಗೆ ಪಕ್ಕದ ಮನೆಯ ಸುಧಾಕರ ಅವರು ಹಸುಗಳ ಕೆಚ್ಚಲಿನ ತೊಟ್ಟುಗಳನ್ನು ಯಾರೋ ಕಿಡಿಗೇಡಿಗಳು ಕತ್ತರಿಸಿದ್ದಾರೆ ಎಂದು ತಿಳಿಸಿದ್ದರು. ಸ್ಥಳಕ್ಕೆ ತೆರಳಿ ನೋಡಿದಾಗ ಮೂರು ಹಸುಗಳ ಕೆಚ್ಚಲು ಕೊಯ್ದು ಪರಾರಿ ಆಗಿರುವುದು ಗೊತ್ತಾಗಿತ್ತು’ ಎಂದು ಕರ್ಣ ದೂರು ನೀಡಿದ್ದಾರೆ. ಆ ದೂರು ಆಧರಿಸಿ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. 

‘ವಾರಕ್ಕೊಮ್ಮೆ ಸ್ನಾನ, ನೀಲಿ ಚಿತ್ರ ವೀಕ್ಷಣೆ’

ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಆರೋಪಿ ಶೇಖ್‌ ನಸ್ರುನನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ಹಲವು ವಿಚಾರಗಳು ಬಯಲಾಗಿವೆ.

‘ವಿಚಾರಣೆ ವೇಳೆ ಆರೋಪಿ ವಿಚಿತ್ರವಾಗಿ ವರ್ತಿಸುತ್ತಿದ್ದ. ವಾರಕ್ಕೊಮ್ಮೆ ಸ್ನಾನ ಮಾಡುವುದಾಗಿ ಹೇಳಿಕೊಂಡಿದ್ದ. ಅಲ್ಲದೇ ಹಿಂದಿ ಭಾಷೆ ಬರುವುದಿಲ್ಲ ಎಂದು ತಿಳಿಸಿದ್ದ. ಯಾವ ಸ್ಥಳದಲ್ಲಿ ಇದ್ದೇನೆ ಎಂಬುದೂ ಅರಿವಿಲ್ಲ ಎಂದು ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ಕೇವಲ ಲುಂಗಿ ಉಟ್ಟುಕೊಳ್ಳುತ್ತೇನೆಂದು ಹೇಳಿಕೆ ನೀಡಿದ್ದಾನೆ. ತನ್ನ ಕೂದಲನ್ನು ತಾನೇ ತೆಗೆದುಕೊಳ್ಳುವುದಾಗಿಯೂ ಹೇಳಿಕೆ ನೀಡಿದ್ದಾನೆ. ಅಲ್ಲದೇ ಹೆಚ್ಚು ನೀಲಿ ಚಿತ್ರ ವೀಕ್ಷಣೆ ಮಾಡುವುದಾಗಿಯೂ ಹೇಳಿಕೊಂಡಿದ್ದಾನೆ’ ಎಂದು ಮೂಲಗಳು ಹೇಳಿವೆ.

‘ವರ್ಷದ ಹಿಂದೆಯೂ ಆರೋಪಿ ಹಸುಗಳ ಜತೆಗೆ ವಿಚಿತ್ರವಾಗಿ ನಡೆದುಕೊಂಡಿದ್ದ’ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಹಸು, ಕರು ಕೊಡಿಸಿದ ಸಂಸದ ಪಿ.ಸಿ.ಮೋಹನ್‌

ಕರ್ಣ ಅವರ ಮನೆಗೆ ಸಂಸದ ಪಿ.ಸಿ.ಮೋಹನ್‌ ಅವರು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಕರ್ಣ ಅವರಿಗೆ ಎರಡು ಹಸು ಹಾಗೂ ಒಂದು ಕರುವನ್ನು ಸಂಸದರು ನೀಡಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರ ನೇತೃತ್ವದಲ್ಲಿ ಕರ್ಣ ಅವರ ಮನೆಯಲ್ಲಿ ಮಂಗಳವಾರ ಸಂಕ್ರಾಂತಿ ಆಚರಿಸಿ ಗೋಪೂಜೆ ನೆರವೇರಿಸಲಿದ್ದೇವೆ’ ಎಂದು ಪಿ.ಸಿ.ಮೋಹನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.