ADVERTISEMENT

ಮೂರು ಮಕ್ಕಳ ತಾಯಿ ಮೇಲೆ ಸಹೋದ್ಯೋಗಿಯಿಂದ ಆ್ಯಸಿಡ್ ದಾಳಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:32 IST
Last Updated 10 ಜೂನ್ 2022, 19:32 IST
ಅಹ್ಮದ್
ಅಹ್ಮದ್   

ಬೆಂಗಳೂರು: ಪತಿಗೆ ವಿಚ್ಛೇದನ ನೀಡಿ ಮೂವರು ಮಕ್ಕಳ ಜೊತೆ ವಾಸವಿದ್ದ 34 ವರ್ಷದ ಮಹಿಳೆ ಮೇಲೆ ಆ್ಯಸಿಡ್ ಎರಚಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಅಹ್ಮದ್ (33) ಎಂಬುವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಗೋರಿಪಾಳ್ಯ ನಿವಾಸಿಯಾದ ಮಹಿಳೆ, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಹೋದ್ಯೋಗಿಯಾದ ಆರೋಪಿ ಅಹ್ಮದ್, ತನ್ನ ಜೊತೆ ಎರಡನೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಮದುವೆಗೆ ಒಪ್ಪದಿದ್ದರಿಂದ ಮಹಿಳೆ ಮೇಲೆ ಆ್ಯಸಿಡ್ ಎರಚಿದ್ದಾನೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದರು.

‘ಶೌಚಾಲಯ ಸ್ವಚ್ಛಗೊಳಿಸುವ ಆ್ಯಸಿಡ್ ಮಿಶ್ರಿತ ದ್ರಾವಣದಿಂದ ದಾಳಿ ನಡೆದಿದೆ. ಮಹಿಳೆಯ ಬಲಗಣ್ಣಿಗೆ ಗಾಯವಾಗಿದ್ದು, ಅವರನ್ನು ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸಲುಗೆ ಬೆಳೆಸಿ ಮದುವೆ ಪ್ರಸ್ತಾಪ: ‘ಪತಿಯಿಂದ ದೂರವಾಗಿದ್ದ ಮಹಿಳೆ ಜೀವನ ನಿರ್ವಹಣೆಗಾಗಿ ಅಗರಬತ್ತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಾರ್ಖಾನೆಯಲ್ಲೇ ಅವರಿಗೆ ಆರೋಪಿ ಅಹ್ಮದ್ ಪರಿಚಯವಾಗಿತ್ತು. ಸ್ನೇಹ ಏರ್ಪಟ್ಟು ಸಲುಗೆಯೂ ಬೆಳೆದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತನ್ನನ್ನು ಮದುವೆಯಾಗುವಂತೆ ಆರೋಪಿ ಪೀಡಿಸಲಾರಂಭಿಸಿದ್ದ. ಅದನ್ನು ನಿರಾಕರಿಸಿದ್ದ ಮಹಿಳೆ, ‘ನಮ್ಮ ಮನೆಯಲ್ಲಿ ಹಿರಿಯರು ಒಪ್ಪುವುದಿಲ್ಲ. ಮದುವೆ ಅಸಾಧ್ಯ’ ಎಂದಿದ್ದರು. ಅಷ್ಟಕ್ಕೆ ಸಿಟ್ಟಾದ ಆರೋಪಿ, ಹಲವು ಬಾರಿ ಜಗಳ ಮಾಡಿದ್ದ. ಶುಕ್ರವಾರ ಬೆಳಿಗ್ಗೆ 9.45ರ ಸುಮಾರಿಗೆ ಜೆ.ಪಿ. ನಗರ ಮೆಟ್ರೊ ನಿಲ್ದಾಣ ಬಳಿಯಿಂದ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ತಡೆದಿದ್ದ ಆರೋಪಿ, ಮಾತನಾಡಬೇಕೆಂದು ಹೇಳಿ ಪಕ್ಕದ ರಸ್ತೆಗೆ ಕರೆದೊಯ್ದಿದ್ದ. ಅಲ್ಲಿಯೇ ಅವರ ಮುಖಕ್ಕೆ ದ್ರಾವಣ ಎರಚಿ ಪರಾರಿಯಾಗಿದ್ದ. ಉರಿ ತಾಳಲಾರದೇ ಮಹಿಳೆ ಕಿರುಚಾಡಲಾರಂಭಿಸಿದ್ದರು. ಸ್ಥಳೀಯರೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಆ್ಯಸಿಡ್ ಎರಚಲು ಆರೋಪಿ ಮೊದಲೇ ಸಂಚು ರೂಪಿಸಿದ್ದ. ಶೌಚಾಲಯ ಸ್ವಚ್ಛಗೊಳಿಸಲು ಬೇಕೆಂದು ಹೇಳಿ ಅಂಗಡಿಯೊಂದರಲ್ಲಿ ಆ್ಯಸಿಡ್ ಮಿಶ್ರಿತ ದ್ರಾವಣ ಖರೀದಿಸಿಟ್ಟುಕೊಂಡಿದ್ದ’ ಎಂದೂ ಮೂಲಗಳು ಹೇಳಿವೆ.

‘ಎರಡು ಮದುವೆಯಾಗಿದ್ದ ಆರೋಪಿ’
'ಆಸ್ಪತ್ರೆಯಿಂದ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋದ ಪೊಲೀಸರು, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದರು. ಕೆಲವೇ ಗಂಟೆಗಳಲ್ಲಿ ಆರೋಪಿ ಅಹ್ಮದ್‌ನನ್ನು ಬಂಧಿಸಿದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಗೋರಿಪಾಳ್ಯ ನಿವಾಸಿಯಾದ ಆರೋಪಿ ಅಹ್ಮದ್‌ಗೆ ಈಗಾಗಲೇ ಎರಡು ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ. ಮೂರನೇ ಮದುವೆಯಾಗಲೆಂದು ಆರೋಪಿ, ಮಹಿಳೆಯನ್ನು ಒತ್ತಾಯಿಸುತ್ತಿದ್ದ. ಆತನ ಹಿನ್ನೆಲೆ ತಿಳಿದಿದ್ದ ಮಹಿಳೆ, ಮದುವೆಗೆ ಒಪ್ಪಿರಲಿಲ್ಲ’ ಎಂದೂ ತಿಳಿಸಿದರು.

ಮೂರನೇ ಆ್ಯಸಿಡ್ ದಾಳಿ
ಎರಡು ತಿಂಗಳ ಅವಧಿಯಲ್ಲಿ ನಗರದಲ್ಲಿ ನಡೆದ ಮೂರನೇ ಆ್ಯಸಿಡ್ ದಾಳಿ ಪ್ರಕರಣ ಇದಾಗಿದೆ.

ಮದುವೆಯಾಗಲು ನಿರಾಕರಿಸಿದರೆಂಬ ಕಾರಣಕ್ಕೆ 24 ವರ್ಷದ ಯುವತಿ ಮೇಲೆ ಆರೋಪಿ ನಾಗೇಶ್ ಬಾಬು ಆ್ಯಸಿಡ್ ಎರಚಿದ್ದ. ಆತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು.

ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ಅಕ್ಕಸಾಲಿಗರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮಂಟೂ ಸಂತ್ರಾ (32) ಅವರ ಮೇಲೆ ಸ್ನೇಹಿತನೇ ಆದ ಆರೋಪಿ ಜನತಾ ಅಡಕ್ ಆ್ಯಸಿಡ್ ದಾಳಿ ಮಾಡಿದ್ದ. ಇದೀಗ 34 ವರ್ಷದ ಮಹಿಳೆ ಮೇಲೂ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.