ಚಿನ್ನದ ನಾಣ್ಯ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮಹಿಳೆಯೊಬ್ಬರಿಗೆ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ವಂಚಿಸಿದ್ದು, ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಶಂಕರಪುರ ರಸ್ತೆಯ ನಿವಾಸಿ ಬಿ.ಎಸ್.ಮಂಜುಳಾ ಅವರು ನೀಡಿದ ದೂರು ಆಧರಿಸಿ ಅಪರಿಚಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯ ಪತ್ತೆಗಾಗಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
10 ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 39 ಗ್ರಾಂ ಚಿನ್ನದ ಸರವನ್ನು ಆರೋಪಿ ಕಸಿದುಕೊಂಡು ಪರಾರಿ ಆಗಿದ್ದಾಳೆ ಎಂದು ದೂರು ನೀಡಲಾಗಿದೆ.
‘ದೂರುದಾರೆ ಬಿ.ಎಸ್.ಮಂಜುಳಾ ಅವರು ಶಂಕರಪುರದಲ್ಲಿ ಆರೋಗ್ಯ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಡಿವಿಜಿ ರಸ್ತೆಯಿಂದ ಗಾಂಧಿ ಬಜಾರ್ ಕಡೆಗೆ ತೆರಳುವಾಗ 55 ರಿಂದ 60 ವರ್ಷ ಅಂದಾಜಿನ ಮಹಿಳೆ ಎದುರಾಗಿದ್ದಳು. ಮಂಜುಳಾ ಅವರ ಬಳಿ ಬಂದು, ಒಂದು ಚಿನ್ನದ ನಾಣ್ಯವನ್ನು ನೀಡಿದ್ದಳು. ‘ಇದು ಲಕ್ಷ್ಮಿ ನಾಣ್ಯ. ನಾಣ್ಯದಿಂದ ಆಭರಣ ಮಾಡಿಸಬೇಕಿದೆ. ಎಷ್ಟು ಗ್ರಾಂ ಇದೆ’ ಎಂದು ಪರಿಶೀಲಿಸಿಕೊಂಡು ಬರುವಂತೆ ತಿಳಿಸಿದ್ದಳು. ಆರೋಪಿಯ ಮಾತು ನಂಬಿದ್ದ ದೂರುದಾರೆ, ಚಿನ್ನಾಭರಣ ಅಂಗಡಿಗೆ ತೆರಳಿ ಪರಿಶೀಲಿಸಿದ್ದರು. ನಾಣ್ಯವನ್ನು ಪರಿಶೀಲಿಸಿದ್ದ ಸಿಬ್ಬಂದಿ, ‘ನಾಣ್ಯವು ಚಿನ್ನದ್ದೇ ಇರಬಹುದು. ನಮ್ಮ ಬಳಿ ಚಿನ್ನಾಭರಣ ಪರಿಶೀಲಿಸುವ ಯಂತ್ರವಿಲ್ಲ. ಆದ್ದರಿಂದ, ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂಬುದಾಗಿ ಹೇಳಿದ್ದರು. ಈ ವಿಷಯನ್ನು ನಾಣ್ಯ ನೀಡಿದ್ದ ಆರೋಪಿಗೆ ದೂರುದಾರೆ ತಿಳಿಸಿದ್ದರು. ನಂತರ, 10 ನಾಣ್ಯಗಳನ್ನು ಆರೋಪಿ ತೋರಿಸಿ, ಇದು ಚಿನ್ನದ್ದು ಎಂದು ಹೇಳಿದ್ದಳು. ಅವುಗಳನ್ನು ನೀಡಿ 39 ಗ್ರಾಂ ಚಿನ್ನದ ಸರವನ್ನು ಪಡೆದುಕೊಂಡು ಪರಾಗಿ ಆಗಿದ್ದಳು. ಚಿನ್ನದ ಅಂಗಡಿಗೆ ತೆರಳಿ ಪರಿಶೀಲಿಸಿದಾಗ ನಕಲಿ ಚಿನ್ನದ ನಾಣ್ಯಗಳು ಎಂಬುದು ಗೊತ್ತಾಯಿತು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.