ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವವೊಡ್ಡಿ ಆಕಾಂಕ್ಷಿಯೊಬ್ಬರಿಂದ ₹9.44 ಲಕ್ಷ ವಂಚಿಸಲಾಗಿದೆ.
ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಗರದ 48 ವರ್ಷದ ಮಹಿಳೆಯೊಬ್ಬರು ಸರ್ಜಾಪುರದ ನಿವಾಸಿ ಸಾಯಿ ನಾರಾಯಣ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಸಾಯಿ ನಾರಾಯಣ ದೂರುದಾರರಿಗೆ ಪರಿಚಿತನಾಗಿದ್ದ. ಆರೋಪಿ ದೂರುದಾರರ ಮನೆಗೆ ಹೋಗಿ, ‘ನಿಮ್ಮ ಮಗನಿಗೆ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ. ಆದರೆ, ನೀವು ನನಗೆ ಹಣ ನೀಡಬೇಕು’ ಎಂದಿದ್ದ. ಅದಕ್ಕೆ ಒಪ್ಪಿದ್ದ ದೂರುದಾರರು ಹಂತ–ಹಂತವಾಗಿ ₹9.44 ಲಕ್ಷ ಹಣ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಯು ದೂರುದಾರರಿಂದ ಹಣದ ಜೊತೆಗೆ ಅವರ ಮಗನ ಶೈಕ್ಷಣಿಕ ದಾಖಲೆಗಳನ್ನು ಪಡೆದುಕೊಂಡಿದ್ದ. ಹಣ ಪಡೆದಿರುವುದರ ಜತೆಗೆ ಶೈಕ್ಷಣಿಕ ದಾಖಲೆಗಳನ್ನೂ ನೀಡದೇ ಮೋಸ ಮಾಡಿದ್ದಾನೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ನಂಬಿಕೆ ದ್ರೋಹ), 420 (ವಂಚನೆ) ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.