ADVERTISEMENT

ಕೆ.ಆರ್.ಪುರ | ಪತಿ ಮೇಲಿನ ಸಿಟ್ಟು: ಪುತ್ರನ ಅಪಹರಣ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 0:01 IST
Last Updated 3 ಆಗಸ್ಟ್ 2024, 0:01 IST
<div class="paragraphs"><p>ಮಗು ಅಪಹರಣ ಮಾಡುತ್ತಿರುವ ದೃಶ್ಯ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ&nbsp;</p></div>

ಮಗು ಅಪಹರಣ ಮಾಡುತ್ತಿರುವ ದೃಶ್ಯ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ 

   

ಕೆ.ಆರ್.ಪುರ: ಪತಿ ಮೇಲಿನ ಸಿಟ್ಟಿನಿಂದ ತಾಯಿಯೇ ಸ್ನೇಹಿತನೊಂದಿಗೆ ಸೇರಿ ತನ್ನ ಮಗನನ್ನು ಅಪಹರಣ ಮಾಡಿದ್ದು ಈ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಿಗೆಹಳ್ಳಿಯ ಕಾಸಾ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್ ಬಳಿ ಅಪಹರಣ ನಡೆದಿದ್ದು ಮಗುವನ್ನು ಕರೆದೊಯ್ಯುತ್ತಿರುವ ದೃಶ್ಯ ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT

ಮಗುವಿನ ಅಜ್ಜ ಸುಂದರ್ ರಾಜ್ ಎಂಬುವವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ಧಾರೆ. ಅಜ್ಜ ಶಾಲೆಗೆ ಕಳುಹಿಸಲು ಬಂದಾಗ ಆರು ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

‘ಬಾಲಕನ ತಂದೆ ಸಿದ್ಧಾರ್ಥ ಅವರು ಚೆನ್ನೈನ ನ್ಯಾಯಾಲಯಕ್ಕೆ ಗುರುವಾರ ತೆರಳಿದ್ದರು. ಹೀಗಾಗಿ ಸಿದ್ಧಾರ್ಥ್ ಅವರ ತಂದೆ ಸುಂದರ್ ರಾಜ್ ಮೊಮ್ಮಗನನ್ನು ಎಂದಿನಂತೆ ಶಾಲೆಗೆ ಬಿಡಲು ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಮಗುವಿನ ತಾಯಿ ಅನುಪಮಾ ಅವರು ಬೆಳಿಗ್ಗೆ 8.30ರ ವೇಳೆಗೆ ತನ್ನ ಸ್ನೇಹಿತ ನೀಲಕಂಠ ಎಂಬುವವರ ಜೊತೆಗೆ ಕಾರಿನಲ್ಲಿ ಬಂದು ಮಗುವನ್ನು ಅಪಹರಣ ಮಾಡಿಕೊಂಡು ಹೋಗಿದ್ದಾರೆ’ ಎಂದು ದೂರು ನೀಡಲಾಗಿದೆ.

‘ಸಾಫ್ಟ್‌ವೇರ್ ಉದ್ಯೋಗಿ ಸಿದ್ಧಾರ್ಥ ಜೊತೆ ಅನುಪಮಾ ಅವರ ವಿವಾಹವಾಗಿತ್ತು. ಬಳಿಕ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಇನ್ನೂ ನ್ಯಾಯಾಲಯದಲ್ಲಿದೆ. 2022ರಲ್ಲಿ ಪತಿ ಮತ್ತು ಮಗು ಬೇಡವೆಂದು ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ನಡುವೆ ಚೆನ್ನೈನ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯು ಆರು ವರ್ಷದ ಮಗುವನ್ನು ಪತಿಯ ಸುಪರ್ದಿಗೆ ನೀಡಿ ಆದೇಶಿಸಿತ್ತು’ ಎಂದು ಮೂಲಗಳು ಹೇಳಿವೆ.

ಸಿದ್ಧಾರ್ಥ ಅವರು ತಂದೆ ಮತ್ತು ಮಗನೊಂದಿಗೆ ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಸಿದ್ಧಾರ್ಥ ವಿರುದ್ಧ ಚೆನ್ನೈನಲ್ಲಿ ನಾಲ್ಕೈದು ಪ್ರಕರಣ ದಾಖಲಿಸಿರುವ ಅನುಪಮಾ ಅವರು ಪತಿಯ ಮೇಲಿನ ಸಿಟ್ಟಿನಿಂದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.