ADVERTISEMENT

ಮನೆಯಲ್ಲೇ ‘ಡ್ರಗ್ಸ್’ ಲ್ಯಾಬ್: ಎನ್‌ಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 21:43 IST
Last Updated 15 ಆಗಸ್ಟ್ 2021, 21:43 IST
ಆಲ್ಫ್ರಝೋಲಮ್ ಡ್ರಗ್ಸ್ ಉತ್ಪಾದಿಸಲು ಮನೆಯಲ್ಲೇ ನಿರ್ಮಿಸಿಕೊಂಡಿದ್ದ ಲ್ಯಾಬ್
ಆಲ್ಫ್ರಝೋಲಮ್ ಡ್ರಗ್ಸ್ ಉತ್ಪಾದಿಸಲು ಮನೆಯಲ್ಲೇ ನಿರ್ಮಿಸಿಕೊಂಡಿದ್ದ ಲ್ಯಾಬ್   

ಬೆಂಗಳೂರು: ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು, ಹೈದರಾಬಾದ್‌ನಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿ ₹ 12.75 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ನಾಲ್ವರು ಆರೋಪಿಗಳನ್ನೂ ಬಂಧಿಸಿದ್ದಾರೆ.

‘ವೈ. ಸುಧಾಕರ್, ಎ. ನರೇಶ್, ಕೆ.ಪಿ. ಕುಮಾರ್ ಹಾಗೂ ಎ. ಶ್ರೀಕಾಂತ್ ಬಂಧಿತರು. ಬೆಂಗಳೂರು ಹಾಗೂ ಹೈದರಾಬಾದ್ ವಲಯದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಸ್ವಿಫ್ಟ್ ಹಾಗೂ ಹೊಂಡಾ ಕಾರುಗಳನ್ನೂ ಜಪ್ತಿ ಮಾಡಲಾಗಿದೆ’ ಎಂದು ಎನ್‌ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಆಲ್ಫ್ರಝೋಲಮ್ ಡ್ರಗ್ಸ್ ಮಾರಾಟ ಜಾಲ ಸಕ್ರಿಯವಾಗಿರುವ ಮಾಹಿತಿ ಸಿಕ್ಕಿತ್ತು. ತನಿಖೆಗೆ ತಂಡಗಳನ್ನು ರಚಿಸಿ, ಡ್ರಗ್ಸ್ ಸಾಗಿಸುತ್ತಿದ್ದ ಕಾರುಗಳನ್ನು ಹಿಂಬಾಲಿಸಲಾಗಿತ್ತು. ಆರೋಪಿ ವೈ. ಸುಧಾಕರ್ ಹೈದರಾಬಾದ್‌ನ ಬಾಲನಗರದಲ್ಲಿರುವ ತಮ್ಮ ಮನೆಯಲ್ಲೇ ಡ್ರಗ್ಸ್ ತಯಾರಿಸಲು ಲ್ಯಾಬ್ ಮಾಡಿಕೊಂಡಿದ್ದು ತಿಳಿಯಿತು. ಮತ್ತೊಬ್ಬ ಆರೋಪಿ ಮನೆ ಮೇಲೆ ನೀರಿನ ಟ್ಯಾಂಕ್ ಇರಿಸಲು ನಿರ್ಮಿಸಲಾಗಿದ್ದ ಸಣ್ಣ ಕೊಠಡಿಯಲ್ಲಿ ಲ್ಯಾಬ್ ಮಾಡಿಕೊಂಡು ಡ್ರಗ್ಸ್ ಉತ್ಪಾದಿಸುತ್ತಿದ್ದ. ಅದಕ್ಕಾಗಿ ಆಧುನಿಕ ಉಪಕರಣಗಳನ್ನು ಬಳಸುತ್ತಿದ್ದ. ಎರಡೂ ಮನೆಗಳ ಮೇಲೆ ದಾಳಿ ಮಾಡಿ, ಲ್ಯಾಬ್‌ನಲ್ಲಿದ್ದ ಸಲಕರಣೆಗಳನ್ನೂ ಸುಪರ್ದಿಗೆ ಪಡೆಯಲಾಗಿದೆ’ ಎಂದೂ ಅವರು ಹೇಳಿದರು.

ADVERTISEMENT

‘ಆಲ್ಫ್ರಝೋಲಮ್ ಡ್ರಗ್ಸ್ ಸೇವನೆಯಿಂದ ಸಾವು ಸಂಭವಿಸುತ್ತದೆ. ಇದು ಅಪಾಯಕಾರಿ ಆಗಿರುವುದರಿಂದ ಅಕ್ರಮವಾಗಿ ಉತ್ಪಾದಿಸುವುದನ್ನು ನಿಷೇಧಿಸಲಾಗಿದೆ. ಅಷ್ಟಾದರೂ ಆರೋಪಿಗಳು, ಐದು ವರ್ಷಗಳಿಂದ ಆಲ್ಫ್ರಝೋಲಮ್ ಉತ್ಪಾದಿಸುತ್ತಿದ್ದರು. ಕಾರ್ತಿಕೇಯ್ ಲೈಫ್ ಸೈನ್ಸ್ ಹೆಸರಿನಲ್ಲಿ ಕಂಪನಿ ಮಾಡಿಕೊಂಡಿದ್ದ ಆರೋಪಿಗಳು, ಡ್ರಗ್ಸ್ ಮಾರಾಟದಿಂದಲೇ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.