ಬೆಂಗಳೂರು: ಉದ್ದೇಶಪೂರ್ವಕವಾಗಿ ನಾಯಿಗಳನ್ನು ಸಾಯಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ತಾನು ಸಾಕಿದ್ದ ಕೋಳಿಯನ್ನು ತಿಂದಿದೆ ಎಂದು ಆರೋಪಿಸಿ ಮನೆ ಮುಂಭಾಗ ಕಟ್ಟಿಹಾಕಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ಕೋಲಿನಿಂದ ಹೊಡೆದು ಸಾಯಿಸಿದರೆ, ಮತ್ತೊಂದೆಡೆ ಮಲಗಿದ ನಾಯಿ ಮೇಲೆ ಚಾಲಕ ಜೀಪ್ ಹತ್ತಿಸಿ ಸಾಯಿಸಿರುವ ಘಟನೆ ನಡೆದಿದೆ.
ಕೋಳಿ ತಿಂದ ಪ್ರಕರಣದಲ್ಲಿ ನಾಯಿ ಸಾಯಿಸಿದ್ದನ್ನು ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಡಿ ವ್ಯಕ್ತಿ ವಿರುದ್ಧ ವಿದ್ಯಾರಣ್ಯಪುರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರ ವಡೇರಹಳ್ಳಿ ನಿವಾಸಿ ಪುಷ್ಪಲತಾ ನೀಡಿದ ದೂರಿನ ಮೇರೆಗೆ ಎದುರು ಮನೆಯ ನಿವಾಸಿ ಮನೋಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯಾಗಿರುವ ಪುಷ್ಪಲತಾ ಅವರು ಜರ್ಮನ್ ಶೆಫರ್ಡ್ ನಾಯಿ ಜೊತೆಗೆ ಹಸು ಹಾಗೂ ಕೋಳಿಗಳನ್ನು ಸಾಕುತ್ತಿದ್ದರು. ಡಿ.24ರಂದು ಮನೆ ಮುಂಭಾಗ ನಾಯಿಯನ್ನು ಕಟ್ಟಿಹಾಕಿ ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಹಿಂತಿರುಗಿದಾಗ ಶ್ವಾನದ ಕಣ್ಣು ಹಾಗೂ ಬಾಯಿಗೆ ಗಾಯವಾಗಿತ್ತು. ಗಾಯದಿಂದ ಚೇತರಿಸಿಕೊಳ್ಳದೆ ಜ.3ರಂದು ನಾಯಿ ಮೃತಪಟ್ಟಿತ್ತು.
ಮನೆ ಮುಂದೆ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಮನೋಜ್, ಕೋಲಿನಿಂದ ಮನಬಂದಂತೆ ಥಳಿಸಿರುವ ದೃಶ್ಯ ಸೆರೆಯಾಗಿತ್ತು.
‘ನಾನು ಸಾಕುತ್ತಿದ್ದ ಕೋಳಿಯನ್ನು ನಾಯಿ ತಿಂದಿದ್ದರಿಂದ ಅದಕ್ಕೆ ಹೊಡೆದಿರುವುದಾಗಿ ಮನೋಜ್ ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಗಿದ ನಾಯಿ ಮೇಲೆ ಜೀಪ್ ಹತ್ತಿಸಿದ ಚಾಲಕ: ಮಲಗಿದ್ದ ನಾಯಿ ಮೇಲೆ ಜೀಪ್ ಹತ್ತಿಸಿದ್ದ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರ್ನಾಟಕ ಪ್ರಾಣಿ ದಯಾ ಮಂಡಳಿ ಸದಸ್ಯ ಅನಿರುದ್ಧ ಅವರ ದೂರಿನ ಮೇರೆಗೆ ಕಾರು ಚಾಲಕ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಡಿಸೆಂಬರ್ 31ರ ಸಂಜೆ ರಘುವನಪಾಳ್ಯ ಬಳಿ ಮಲಗಿದ್ದ ನಾಯಿ ಮೇಲೆ ಜೀಪ್ ಹತ್ತಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದು, ಬಳಿಕ ಮೃತದೇಹವನ್ನ ಚೀಲದಲ್ಲಿಟ್ಟು ಸ್ಥಳಾಂತರಿಸಿದ್ದರು.
ಈ ಸಂಬಂಧ ಜ.9ರಂದು ಇನ್ಸ್ಟ್ರಾಗ್ರಾಮ್ನಲ್ಲಿ ವಿಡಿಯೊ ಹರಿದಾಡಿದ ಕಾರಣ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಬರುವಂತೆ ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.