ADVERTISEMENT

ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಟೆಕಿಗೆ ₹17.66 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 14:33 IST
Last Updated 12 ಸೆಪ್ಟೆಂಬರ್ 2025, 14:33 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ₹17.66 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್‌ನ ಸೈಬರ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹಣ ಕಳೆದುಕೊಂಡಿರುವ ಮಾರತ್‌ಹಳ್ಳಿಯ ನಿವಾಸಿ, ಟೆಕಿ ಎನ್‌.ಲಾವಣ್ಯ ಅವರು ನೀಡಿದ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 318(4), 319(2)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಅಶ್ಮಿತಾ ಎಂಬಾಕೆಯ ವಿರುದ್ಧ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಟೆಕಿ ಲಾವಣ್ಯ ಅವರನ್ನು ಟೆಲಿಗ್ರಾಂ ಆ್ಯಪ್‌ ಮೂಲಕ ಸಂಪರ್ಕಿಸಿದ್ದ ಸೈಬರ್ ವಂಚಕರು, ಅರೆಕಾಲಿಕ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದರು. ಹೋಟೆಲ್‌ ಹಾಗೂ ರೆಸ್ಟೊರೆಂಟ್‌ಗಳ ಕುರಿತು ಗೂಗಲ್‌ ರಿವ್ಯೂವ್‌ ಮಾಡಿ ಹಣ ಗಳಿಸಬಹುದು ಎಂದು ಆಮಿಷವೊಡ್ಡಲಾಗಿತ್ತು. ಅಲ್ಲದೇ ಟೆಲಿಗ್ರಾಂ ಆ್ಯಪ್‌ ಮೂಲಕ ಲಿಂಕ್‌ವೊಂದನ್ನು ಕಳುಹಿಸಿದ್ದ ಸೈಬರ್‌ ವಂಚಕರು, ಹಣ ಹೂಡಿಕೆ ಮಾಡಿ ಲಾಭ ಗಳಿಸುವಂತೆ ತಿಳಿಸಿದ್ದರು. ಕರೆ ಮಾಡಿದವರ ಮಾತು ನಂಬಿದ್ದ ಟೆಕಿ ಆರಂಭದಲ್ಲಿ ₹10 ಸಾವಿರ ಹಣ ಹೂಡಿಕೆ ಮಾಡಿದ್ದರು. ಕೆಲವು ದಿನ ಕಳೆದ ಮೇಲೆ ₹10,700 ನೀಡಿದ್ದರು. ಇನ್ನೂ ಹೆಚ್ಚಿನ ‘ಟಾಸ್ಕ್‌’ ಪೂರ್ಣಗೊಳಿಸಿದರೆ, ಅಧಿಕ ಲಾಭ ದೊರೆಯಲಿದೆ ಎಂದು ವಂಚಕರು ಹೇಳಿದ್ದರು. ಲಾವಣ್ಯ ಅವರು ವಿವಿಧ ಬ್ಯಾಂಕ್‌ಗಳ 10 ಖಾತೆಗಳಿಂದ ₹17.66 ಲಕ್ಷ ಹೂಡಿಕೆ ಮಾಡಿದ್ದರು. ಅದಾದ ಮೇಲೆ ವಂಚಕರು ₹10 ಸಾವಿರ ವಾಪಸ್ ನೀಡಿದ್ದರು. ಬಳಿಕ ಯಾವುದೇ ಹಣವನ್ನು ವಾಪಸ್ ನೀಡದೇ ವಂಚಿಸಿದ್ದಾರೆ’ ಎಂಬುದಾಗಿ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.