
ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ‘ಕಾಲ್ ಸೆಂಟರ್’ ಸೋಗಿನಲ್ಲಿ ಕರೆ ಮಾಡಿ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಪತ್ತೆ ಹಚ್ಚಿರುವ ‘ಸೈಬರ್ ಕಮಾಂಡ್ ಸೆಂಟರ್’ ಅಧಿಕಾರಿಗಳು, ಹೊರರಾಜ್ಯದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್‌ನ ಕುಮಾವತ್ ಯೋಗೇಶ್ ಅಮರರಾಮ್ ಹಾಗೂ ದೆಹಲಿಯ ಇಮ್ರಾನ್ ಬಂಧಿತರು.
ಬಂಧಿತರಿಂದ 31 ಲ್ಯಾಪ್‌ಟಾಪ್, 13 ಮೊಬೈಲ್ ಫೋನ್ ಹಾಗೂ 16 ಸಿಮ್, ಮಲ್ಟಿವೇವ್ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿದ್ದ ಲೆಟರ್ ಹೆಡ್ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಯನಗರದ ಎರಡನೇ ಮುಖ್ಯರಸ್ತೆಯ ಎಂಟನೇ ಬ್ಲಾಕ್‌ನಲ್ಲಿ ಕುಮಾವತ್ ಯೋಗೇಶ್ ಅಮರರಾಮ್ ಅವರು ನೆಲಸಿದ್ದರೆ, ಬಿಟಿಎಂ ಎರಡನೇ ಹಂತದ ಬಾಡಿಗೆ ಮನೆಯಲ್ಲಿ ಇಮ್ರಾನ್ ನೆಲಸಿದ್ದರು.
ಕೇಂದ್ರ ವಿಭಾಗದ ಸೈಬರ್ ಅಪರಾಧ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಡಿ) ಅಡಿ ಪ್ರಕರಣ ದಾಖಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡಲಾಗುವುದು ಎಂದು ಹೇಳಿ ಆರೋಪಿಗಳು ವಂಚನೆ ಮಾಡುತ್ತಿದ್ದರು.
ಜಯನಗರದ 9ನೇ ಬ್ಲಾಕ್‌ನ 26ನೇ ಮುಖ್ಯರಸ್ತೆಯ ಅಂಜನಾದ್ರಿ ಅವೆನ್ಯೂ ಕಟ್ಟಡದ ಮೂರನೇ ಮಹಡಿಯಲ್ಲಿ ಮಲ್ಟಿವೇವ್ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಆರೋಪಿಗಳು ಕಂಪನಿ ತೆರೆದಿದ್ದರು. ಆ ಕಂಪನಿಯನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಹೊರ ರಾಜ್ಯದ ಸಿಬ್ಬಂದಿ ನೇಮಕ:
‘15 ರಾಜ್ಯಗಳ ‘ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್’ಗಳನ್ನು ಆರೋಪಿಗಳು ಕೆಲಸಕ್ಕೆ ನೇಮಿಸಿಕೊಂಡಿದ್ದರು. ‘ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್’ಗಳು ಕಾಲ್ ಸೆಂಟರ್ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ನಂಬಿಕೆ ಬರುವಂತೆ ಮಾತನಾಡುತ್ತಿದ್ದರು. ಬಳಿಕ, ಸಾರ್ವಜನಿಕರ ವೈಯಕ್ತಿಕ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅಲ್ಲದೇ ಬ್ಯಾಂಕ್ ಖಾತೆಯ ವಿವರ ನೀಡಿ ಅದಕ್ಕೆ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಹಣ ವರ್ಗಾವಣೆಯಾದ ಕೆಲವೇ ಕ್ಷಣಗಳಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು’ ಎಂದು ಸೈಬರ್ ಅಪರಾಧ ಠಾಣೆಯ ಮೂಲಗಳು ತಿಳಿಸಿವೆ.
‘ಹಣ ಕಳೆದುಕೊಂಡವರ ಪೈಕಿ ಕೆಲವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಲಾಯಿತು. ದೂರುದಾರರಿಗೆ ಬಂದ ದೂರವಾಣಿ ಕರೆ ವಿವರಗಳ ಪರಿಶೀಲನೆ ನಡೆಸಿದಾಗ ಲೊಕೇಷನ್ ಬಿಟಿಎಂ ಲೇಔಟ್ ತೋರಿಸುತ್ತಿತ್ತು. ಆರೋಪಿಗಳು ಸಿಮ್ ಬಳಸಿದ್ದ ಮೊಬೈಲ್‌ನ ಐಎಂಇಐ ಸಂಖ್ಯೆ ಪತ್ತೆ ಮಾಡಲಾಯಿತು. ಐಎಂಇಐಗೆ ಲಿಂಕ್ ಆಗಿರುವ ಇ–ಮೇಲ್ ಐಡಿ ಪತ್ತೆಹಚ್ಚಿದಾಗ ಆರೋಪಿಗಳ ಸುಳಿವು ಲಭಿಸಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಗೂಗಲ್‌ನಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದವರ ಮಾಹಿತಿಯನ್ನು ಆರೋಪಿಗಳು ಕಲೆಹಾಕುತ್ತಿದ್ದರು. ಹೊರ ರಾಜ್ಯದವರ ಬ್ಯಾಂಕ್ ಖಾತೆಗಳ ವಿವರ ಪಡೆದುಕೊಳ್ಳುತ್ತಿದ್ದರು. ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ಸಿಮ್ ಖರೀದಿಸುತ್ತಿದ್ದರು. ಬ್ಯಾಂಕ್ ವಿವರ ನೀಡಿದವರು ಹಾಗೂ ಸಿಮ್ ಖರೀದಿಗೆ ನೆರವಾದವರಿಗೆ ಕಮಿಷನ್ ನೀಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.
‘ವಂಚನೆಯಿಂದ ಬಂದ ಹಣವನ್ನು ನಕಲಿ ಬ್ಯಾಂಕ್ (ಮ್ಯೂಲ್ ಅಕೌಂಟ್) ಖಾತೆಗಳಿಗೆ ಆರೋಪಿಗಳು ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಬಳಿಕ ಸಹಚರರ ಮೂಲಕ ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.
ಸೈಬರ್ ಕಮಾಂಡ್ ಸೆಂಟರ್‌ನ ಡಿಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.