
ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಿತನಾದ ಯುವಕನಿಂದ ಹಣ ಮತ್ತು ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಕವಿಪ್ರಿಯಾ ಹಾಗೂ ಆಕೆಯ ಸ್ನೇಹಿತನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಅವಿನಾಶ್ ನೀಡಿದ ದೂರಿನ ಮೇಲೆ ಕವಿಪ್ರಿಯಾ ಎಂಬುವರನ್ನು ಬಂಧಿಸಿ, ವಿಚಾರಣೆ ನಡೆಸಲಾಯಿತು. ಅವರ ಹೇಳಿಕೆ ಆಧರಿಸಿ ಸ್ನೇಹಿತ ಹರ್ಷವರ್ಧನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಿನಾಶ್ ಪೀಣ್ಯದ ನಾಗಸಂದ್ರದ ಪೇಯಿಂಗ್ ಗೆಸ್ಟ್‌ನಲ್ಲಿ (ಪಿ.ಜಿ) ವಾಸವಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳ ಹಿಂದೆ ‘ಹ್ಯಾಪನ್ ಆ್ಯಪ್’ ಡೇಟಿಂಗ್ ಆ್ಯಪ್‌ನಲ್ಲಿ ಕವಿಪ್ರಿಯಾ ಅವರ ಪರಿಚಯವಾಗಿದೆ. ಬಳಿಕ ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಮಾತನಾಡುತ್ತಿದ್ದರು. ನವೆಂಬರ್ 1ರಂದು ಇಂದಿರಾ ನಗರದ ರೆಸ್ಟೋರೆಂಟ್‌ವೊಂದರಲ್ಲಿ ಭೇಟಿಯಾಗಿ ಮದ್ಯದ ಪಾರ್ಟಿ ಮಾಡಿದ್ದರು.
ಮದ್ಯ ಸೇವನೆ ಬಳಿಕ ಅವಿನಾಶ್, ಇಂತಹ ಸ್ಥಿತಿಯಲ್ಲಿ ಪಿ.ಜಿಗೆ ಹೋಗಲು ಆಗುವುದಿಲ್ಲ ಎಂದಿದ್ದಾರೆ. ಅದನ್ನೇ ದುರಪಯೋಗ ಪಡಿಸಿಕೊಂಡ ಕವಿಪ್ರಿಯಾ, ಲಾಡ್ಜ್‌ವೊಂದರಲ್ಲಿ ಕೊಠಡಿ ಬುಕ್ ಮಾಡಿ ಕರೆದೊಯ್ದಿದ್ದಾರೆ. ಅಲ್ಲಿ ಇಬ್ಬರೂ ಊಟ ಮಾಡಿದ್ದರು. ಆ ಬಳಿಕ ಆರೋಪಿ ಮತ್ತು ಬರುವ ಔಷಧಿಯನ್ನು ನೀರಿನಲ್ಲಿ ಬೆರೆಸಿ ಅವಿನಾಶ್‌ಗೆ ಕುಡಿಸಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಚಿನ್ನದ ಸರ, ಚಿನ್ನದ ಕೈ ಬಳೆ, ₹10 ಸಾವಿರ ನಗದು ಸೇರಿ ₹6.80 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.