ನರೇಂದ್ರ ಮೋದಿ, ಡಿ.ಕೆ. ಶಿವಕುಮಾರ್
(ಚಿತ್ರ ಕೃಪೆ: X/@DKShivakumar)
ಬೆಂಗಳೂರು: ಬೆಂಗಳೂರಿನ ಮೂಲಕವೇ 'ಬ್ರ್ಯಾಂಡ್ ಭಾರತ'ವನ್ನು ಕಟ್ಟಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿಕೆಶಿ, 'ಕೇಂದ್ರ ಸರ್ಕಾರ ನಮ್ಮ ಜೊತೆ ನಿಲ್ಲುವ ವಿಶ್ವಾಸವಿದೆ. ಏಕೆಂದರೆ ಪ್ರಧಾನಿಯವರು ಬೆಂಗಳೂರಿನ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನ ಮೂಲಕವೇ 'ಬ್ರ್ಯಾಂಡ್ ಭಾರತ'ವನ್ನು ಕಟ್ಟಬೇಕಿದೆ. ಈಗ ನಮಗೆ ಅವಕಾಶದ ಬಾಗಿಲು ತೆರೆದಿದೆ ಎನ್ನುವ ವಿಶ್ವಾಸ ನಮಗಿದೆ ಅಂದುಕೊಂಡಿದ್ದೇನೆ' ಎಂದಿದ್ದಾರೆ.
'ತೆರಿಗೆ ಸಂಗ್ರಹದಲ್ಲಿ ಬೆಂಗಳೂರು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಪ್ರಪಂಚವು ಬೆಂಗಳೂರಿನ ಮೂಲಕ ದೇಶವನ್ನು ನೋಡುತ್ತಿದೆ. ಮೂರು ದಿನಗಳ ಹಿಂದೆ ಫಿಲಿಪ್ಪೀನ್ಸ್ ಅಧ್ಯಕ್ಷರು ಬೆಂಗಳೂರಿಗೆ ಭೇಟಿ ನೀಡಿ, ಇಲ್ಲಿನ ಅನೇಕ ನಾಯಕರ ಜೊತೆ ಮಾತುಕತೆ ನಡೆಸಿದರು. ಇದು ಬೆಂಗಳೂರಿನ ಶಕ್ತಿ. ಈ ಕಾರಣಕ್ಕೆ ಈ ನಗರದ ಮತ್ತಷ್ಟು ಅಭಿವೃದ್ಧಿಗೆ ಅನುದಾನ ಬೇಕಿದೆ' ಎಂದು ಹೇಳಿದ್ದಾರೆ.
ಮೆಟ್ರೋ ರೈಲು ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳಿಗೆ ಸಮರ್ಪಕ ಅನುದಾನ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಡಿಕೆಶಿ ಮನವಿ ಸಲ್ಲಿಸಿದ್ದಾರೆ.
'ಸುಮಾರು ₹1.50 ಲಕ್ಷ ಕೋಟಿ ಅನುದಾನ ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಅವಶ್ಯವಿದೆ. ಆದ ಕಾರಣಕ್ಕೆ ಸಮರ್ಪಕ ಅನುದಾನ ನೀಡಿ ಎಂದು ಮನವಿ ಮಾಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.