ADVERTISEMENT

ಬೆಂಗಳೂರು ಸಮಗ್ರ ಅಭಿವೃದ್ಧಿ ಯೋಜನೆ: ₹ 1.5 ಲಕ್ಷ ಕೋಟಿ ಅನುದಾನಕ್ಕೆ ಡಿಸಿಎಂ ಮನವಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 19:18 IST
Last Updated 10 ಆಗಸ್ಟ್ 2025, 19:18 IST
ಪ್ರಧಾನಿ ನರೇಂದ್ರ ಮೋದಿಯವರಿಗೆ ಡಿ.ಕೆ. ಶಿವಕುಮಾರ್‌ ಮನವಿ ಸಲ್ಲಿಸಿ ಚರ್ಚಿಸಿದರು
ಪ್ರಧಾನಿ ನರೇಂದ್ರ ಮೋದಿಯವರಿಗೆ ಡಿ.ಕೆ. ಶಿವಕುಮಾರ್‌ ಮನವಿ ಸಲ್ಲಿಸಿ ಚರ್ಚಿಸಿದರು   

ಬೆಂಗಳೂರು: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡಿರುವ ಯೋಜನೆಗಳ ಅಂದಾಜು ವೆಚ್ಚ ₹ 1.50 ಲಕ್ಷ ಕೋಟಿಯಾಗಿದ್ದು, ಕೇಂದ್ರ ಸರ್ಕಾರವು ಸಮರ್ಪಕ ಅನುದಾನವನ್ನು ಒದಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸುರಂಗ ರಸ್ತೆ, ಆರ್ಟಿಲರಿ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಪೆರಿಫೆರಲ್ ವರ್ತುಲ ರಸ್ತೆ, ಘನತ್ಯಾಜ ವಿಲೇವಾರಿ ಸೇರಿದಂತೆ ಇತರೇ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

‘ಕರ್ನಾಟಕವು ವರ್ಷಕ್ಕೆ ಸುಮಾರು ₹4.50 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ಕರ್ನಾಟಕ ಸರ್ಕಾರವು ಯಶಸ್ವಿಯಾಗಿ ಮೆಟ್ರೊ ಮಾರ್ಗ ಹಾಗೂ ಡಬಲ್ ಡೆಕರ್ ಅನುಷ್ಠಾನಗೊಳಿಸಿದೆ. ಐದನೇ ಹಂತದ‌ ಕಾವೇರಿ ಕುಡಿಯುವ ನೀರು ಯೋಜನೆಯೂ ಯಶಸ್ವಿಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಕುಡಿಯುವ ನೀರಿನ ಯೋಜನೆಗಳು, ರಾಜಕಾಲುವೆಗಳ ಪಕ್ಕದಲ್ಲಿ ನೂತನ ರಸ್ತೆಗಳ ನಿರ್ಮಾಣ ಇತ್ಯಾದಿ ಯೋಜನೆಗಳಿಂದ ಬೆಂಗಳೂರು ಇನ್ನಷ್ಟು ಪ್ರಮುಖ ನಗರವಾಗಿ ಅಭಿವೃದ್ಧಿ
ಯಾಗಲಿದೆ’ ವಿವರಿಸಿದ್ದಾರೆ.

ADVERTISEMENT

ಸುರಂಗ ರಸ್ತೆ ಹಾಗೂ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ₹ 41,780 ಕೋಟಿ, ಪ್ರಮುಖ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ₹ 15 ಸಾವಿರ ಕೋಟಿ, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ₹ 27,000 ಕೋಟಿ, ಘನತ್ಯಾಜ್ಯ ವಿಲೇವಾರಿಗೆ ₹3,200 ಕೋಟಿ, ಡಬಲ್ ಡೆಕರ್‌ಗಳ ನಿರ್ಮಾಣಕ್ಕೆ ₹ 8,916 ಕೋಟಿ ವೆಚ್ಚವಾಗಲಿದೆ. ಮೆಟ್ರೊ ಹಂತ 2, 2ಎ, 3, 3ಎ ಯೋಜನೆಗಳ ಅನುಷ್ಠಾನದಿಂದ ರೈಲು ಮಾರ್ಗದ ಒಟ್ಟು ಉದ್ದ 128 ಕಿ.ಮೀಗೆ ವಿಸ್ತಾರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜಕಾಲುವೆಗಳ ಪಕ್ಕ ಹೊಸ ರಸ್ತೆಗಳ ನಿರ್ಮಾಣಕ್ಕೆ ₹ 3000 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ನಗರಕ್ಕೆ ಹೆಚ್ಚುವರಿಯಾಗಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ₹6,939 ಕೋಟಿ ಅನುದಾನ ಬೇಕಾಗಬಹುದು ಎಂದು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ
ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.

ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ ತನ್ನಿ
ಬೆಂಗಳೂರು-ಬಿಡದಿ- ಮೈಸೂರು, ಬೆಂಗಳೂರು- ಹಾರೋಹಳ್ಳಿ- ಕನಕಪುರ, ಬೆಂಗಳೂರು- ನೆಲಮಂಗಲ- ತುಮಕೂರು, ಬೆಂಗಳೂರು- ಏರ್ ಪೋರ್ಟ್- ಚಿಕ್ಕಬಳ್ಳಾಪುರ, ಬೆಂಗಳೂರು- ಹೊಸಕೋಟೆ- ಕೋಲಾರಕ್ಕೆ ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ಯೋಜನೆಯಡಿ ‘ನಮೋ ಭಾರತ್ ರೈಲು ಯೋಜನೆ’ ಅನುಷ್ಠಾನಗೊಳಿಸಲು ಡಿ.ಕೆ. ಶಿವಕುಮಾರ್‌ ಮನವಿ ಸಲ್ಲಿಸಿದರು. ನಗರದಲ್ಲಿ ದಿನವೊಂದಕ್ಕೆ 6,500 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಇದರ ವೈಜ್ಞಾನಿಕ ವಿಲೇವಾರಿಗೆ ಸಿಎನ್‌ಜಿ ತಯಾರಿಕಾ ಘಟಕ, ಗೊಬ್ಬರ ಘಟಕ,‌ ವೇಸ್ಟ್ ಎನರ್ಜಿ ಘಟಕಗಳ ಸ್ಥಾಪನೆಗೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.