ADVERTISEMENT

ಬೆಂಗಳೂರು |ಮಾಲಿನ್ಯ ತಡೆಗಟ್ಟದಿದ್ದರೆ ಕಾದಿದೆ ಸಂಕಷ್ಟ: ರೇವತಿ ಕಾಮತ್

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:44 IST
Last Updated 10 ಮೇ 2025, 15:44 IST
<div class="paragraphs"><p>ನಗರದಲ್ಲಿ ಶನಿವಾರ ವಿಮೂವ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ&nbsp;ಡಿ.ರಂದೀಪ್ ಉದ್ಘಾಟಿಸಿದರು. ವಿನಯ್ ಶಿಂಧೆ, ಕೆ.ಜಿ. ಸುನಿಲ್, ನಟಿ ಸಂಯುಕ್ತ ಹೊರನಾಡು ಉಪಸ್ಥಿತರಿದ್ದರು </p></div>

ನಗರದಲ್ಲಿ ಶನಿವಾರ ವಿಮೂವ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಡಿ.ರಂದೀಪ್ ಉದ್ಘಾಟಿಸಿದರು. ವಿನಯ್ ಶಿಂಧೆ, ಕೆ.ಜಿ. ಸುನಿಲ್, ನಟಿ ಸಂಯುಕ್ತ ಹೊರನಾಡು ಉಪಸ್ಥಿತರಿದ್ದರು

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ಮಾಲಿನ್ಯ ತಡೆಗಟ್ಟಿ, ಪರಿಸರ ರಕ್ಷಿಸದಿದ್ದರೆ ಭವಿಷ್ಯದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪರಿಸರ ಕಾರ್ಯಕರ್ತೆ ರೇವತಿ ಕಾಮತ್ ಕಳವಳ ವ್ಯಕ್ತಪಡಿಸಿದರು.

ADVERTISEMENT

ನಗರದಲ್ಲಿ ಶನಿವಾರ ವಿಮೂವ್ ಫೌಂಡೇಶನ್ ಆಯೋಜಿಸಿದ್ದ ‘ಇಂಪ್ಯಾಕ್ಟಾಥಾನ್' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸುಸ್ಥಿರ, ಹಸಿರು ಮತ್ತು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಪರಿಣಾಮಕಾರಿಯಾಗಿ ಕೆಲಸವಾಗಬೇಕಿದೆ. ಮಾಲಿನ್ಯ ತಡೆಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಿದೆ. ದಿನದಿಂದ ದಿನಕ್ಕೆ ನೀರು, ಗಾಳಿ ಮತ್ತು ಪರಿಸರ ಕಲುಷಿತವಾಗುತ್ತಿದ್ದು, ಇದನ್ನು ತಡೆಗಟ್ಟುವ ಕೆಲಸವಾಗಬೇಕಿದೆ. ಕೊಳಚೆ ನೀರಿಂದ ಹಾಳಾಗಿರುವ ನದಿ, ಕೆರೆಗಳನ್ನು ಪುನಶ್ಚೇತನ ಮಾಡಬೇಕು ಎಂದು ಒತ್ತಾಯಿಸಿದರು. 

ಮಾಲಿನ್ಯದಿಂದ ಕ್ಯಾನ್ಸರ್ ಸೇರಿ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಬೇಕಿದೆ. ನಗರ ಸೇರಿ ರಾಜ್ಯದ ಕೆಲ ನಗರಗಳಲ್ಲಿ ಸುಲಭವಾಗಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸಿಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ರೇವತಿ ಕಾಮತ್ ಆಗ್ರಹಿಸಿದರು.

ವಿಮೂವ್ ಸಂಸ್ಥಾಪಕ ವಿನಯ್ ಶಿಂಧೆ, ಸುಸ್ಥಿರ, ಹಸಿರು ಮತ್ತು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಪ್ರತಿಯೊಬ್ಬರೂ ನೀಡುವ ಸಲಹೆ ಮತ್ತು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ‘ಸುಸ್ಥಿರ ಗ್ರೇಟರ್ ಬೆಂಗಳೂರು' ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 21 ದಿನ ಅಭಿಯಾನವನ್ನು ಕೈಗೊಂಡಿದ್ದೇವೆ. ಇದಕ್ಕೆ ವಿವಿಧ ಸಂಸ್ಥೆಗಳು, ಪರಿಸರ ತಜ್ಞರು ಕೈಜೋಡಿಸಿದ್ದಾರೆ ಎಂದು ಮಾಹಿತಿ ನೀಡಿದರು.  

ನಟಿ ಸಂಯುಕ್ತ ಹೊರನಾಡು ಮಾತನಾಡಿ, ತಾಪಮಾನ ಹೆಚ್ಚಳ ನಿಯಂತ್ರಣ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್, ಅಂತರರಾಷ್ಟ್ರೀಯ ಮಟ್ಟದ ನಗರವಾಗಿರುವ ಬೆಂಗಳೂರನ್ನು ‘ಸುಸ್ಥಿರ ನಗರ’ವನ್ನಾಗಿಸುವ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತುವ ಅಗತ್ಯವಿದೆ. ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.