ADVERTISEMENT

ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 1,268 ಚಾಲನಾ ಪರವಾನಗಿ ಅಮಾನತು

ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಕಾರ್ಯಾಚರಣೆ: 23 ಸಾವಿರಕ್ಕೂ ಅಧಿಕ ಪ್ರಕರಣ

ಕೆ.ಎಸ್.ಸುನಿಲ್
Published 15 ಜನವರಿ 2025, 0:30 IST
Last Updated 15 ಜನವರಿ 2025, 0:30 IST
ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಸವಾರನನ್ನು ತಪಾಸಣೆಗೆ ಒಳಪಡಿಸಿದ ಸಂಚಾರ ಪೊಲೀಸರು
ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಸವಾರನನ್ನು ತಪಾಸಣೆಗೆ ಒಳಪಡಿಸಿದ ಸಂಚಾರ ಪೊಲೀಸರು   

ಬೆಂಗಳೂರು: ನಗರದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ವಿಭಾಗದ ಪೊಲೀಸರು, ಕಳೆದ ವರ್ಷ (2024) 23,574 ಪ್ರಕರಣಗಳನ್ನು ದಾಖಲಿಸಿ, ₹23 ಕೋಟಿ ದಂಡ ಸಂಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ 3,670 ಚಾಲನಾ ಪರವಾನಗಿಗಳನ್ನು (ಡಿ.ಎಲ್‌) ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿತ್ತು. ಈ ಪೈಕಿ 1,268 ಡಿ.ಎಲ್‌.ಗಳನ್ನು ಅಮಾನತುಗೊಳಿಸಲಾಗಿದೆ.

‌ನಗರದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, 12 ಲಕ್ಷಕ್ಕೂ ಅಧಿಕ ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕರು/ಸವಾರರ ವಿರುದ್ಧ 23 ಸಾವಿರ ಪ್ರಕರಣ ದಾಖಲಿಸಲಾಗಿದೆ. ತಪಾಸಣೆಗೊಳಗಾದ ಒಟ್ಟು ಜನರಲ್ಲಿ ಶೇಕಡ 1.87ರಷ್ಟು ಮಂದಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವುದು ದೃಢಪಟ್ಟಿತ್ತು.

ADVERTISEMENT

ಇದರಲ್ಲಿ ಶಾಲಾ ವಾಹನ ಚಾಲಕರ ವಿರುದ್ಧ 201, ಖಾಸಗಿ ಬಸ್ ಚಾಲಕರ ವಿರುದ್ಧ 83, ವಾಟರ್ ಟ್ಯಾಂಕರ್‌ ಚಾಲಕರ ವಿರುದ್ಧ 67 ಪ್ರಕರಣ ದಾಖಲಿಸಿ ನ್ಯಾಯಾಲಯದ ಮೂಲಕ ದಂಡ ವಸೂಲಿ ಮಾಡಲಾಗಿದೆ.

ಕೇವಲ ನಾಲ್ಕು ತಿಂಗಳಲ್ಲಿ 12 ಸಾವಿರ ಪ್ರಕರಣ ದಾಖಲಾಗಿದ್ದು, ಪಾನಮತ್ತ ಚಾಲಕರ ಸಂಖ್ಯೆ ಹೆಚ್ಚಾಗಿರುವುದು ಅಂಕಿ ಅಂಶದಿಂದ ಗೊತ್ತಾಗಿದೆ. 

ಪಾನಮತ್ತ ಚಾಲಕರಿಗೆ ₹10 ಸಾವಿರ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಗೆ ಸಿಕ್ಕಿಬಿದ್ದಾಗ ಮೂರು ತಿಂಗಳವರೆಗೆ ಡಿ.ಎಲ್ ಅಮಾನತು ಮಾಡಲಾಗುತ್ತದೆ. ಎರಡನೇ ಬಾರಿಗೆ ಆರು ತಿಂಗಳವರೆಗೆ ಅಮಾನತು ಮಾಡಲಾಗುತ್ತದೆ. ಇದೇ ವೇಳೆ ಪೊಲೀಸರು ವಾಹನವನ್ನು ವಶಕ್ಕೆ ಪಡೆಯುತ್ತಾರೆ.

‘ಪಾನಮತ್ತರಾಗಿ ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಹಲವರ ಬಳಿ ಚಾಲನಾ ಪರವಾನಗಿಯೇ ಇರುವುದಿಲ್ಲ. ಡಿ.ಎಲ್ ಅಮಾನತಿಗೆ ಹೆದರಿ ಚಾಲಕರು ತಮ್ಮ ಬಳಿ ಡಿ.ಎಲ್ ಇಲ್ಲ ಎಂದು ಸುಳ್ಳು ಹೇಳಿರುವ ಉದಾಹರಣೆಯೂ ಇದೆ. ಹೊರ ರಾಜ್ಯದ ವಾಹನಗಳ ಚಾಲಕರ ಡಿ.ಎಲ್‌ಗಳನ್ನು ಅಮಾನತುಗೊಳಿಸುವಂತೆ ಆಯಾ ರಾಜ್ಯಗಳಿಗೆ ಶಿಫಾರಸು ಕಳುಹಿಸುವ ಪ್ರಕ್ರಿಯೆ ಕಷ್ಟವಾಗಿದೆ’ ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಡಿಸೆಂಬರ್‌ 31ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ 531 ಮಂದಿ ಚಾಲಕರು, ಸವಾರರು ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ತಪಾಸಣೆಗೆ ಒಳಪಡಿಸಿದ 28,127 ವಾಹನ ಚಾಲಕರ ಪೈಕಿ 531 ಮಂದಿ ಮದ್ಯ ಸೇವಿಸಿರುವುದು ದೃಢಪಟ್ಟಿದ್ದು, ಪ್ರಕರಣ ದಾಖಲಿಸಲಾಗಿದೆ. ತಪ್ಪಿತಸ್ಥರು ನ್ಯಾಯಾಲಯದಲ್ಲಿ ತಲಾ ₹ 10 ಸಾವಿರ ದಂಡ ಕಟ್ಟಬೇಕಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಚಾಲನಾ ಪರವಾನಗಿ ಇಲ್ಲದಿರುವವರು ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವುದು ಪತ್ತೆಯಾದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ. ಡಿ.ಎಲ್ ರಹಿತವಾಗಿ ವಾಹನ ಚಾಲನೆ ಮಾಡಿದ್ದ ಸವಾರರೊಬ್ಬರು ಮದ್ಯ ಸೇವಿಸಿದ್ದು ಪತ್ತೆಯಾಗಿದ್ದು, ಅವರ ವಿರುದ್ಧ ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಹೇಳಿದರು.

‘ಪಾನಮತ್ತರಾಗಿ ಶಾಲಾ ವಾಹನ ಚಾಲನೆ ಹಾಗೂ ವಾಹನಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆದೊಯ್ಯುತ್ತಿರುವ ಕುರಿತು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳಿಗೂ ನೋಟಿಸ್ ನೀಡಲಾಗುತ್ತಿದೆ’ ಎಂದರು.

ಮದ್ಯ ಸೇವಿಸಿ ಚಾಲನೆ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಾಹನಗಳ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಎಂ.ಎನ್.ಅನುಚೇತ್ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.