ADVERTISEMENT

ಪರ್ಯಾಯ ಪ್ರಾಧಿಕಾರ ತನಿಖೆ ನಡೆಸುತ್ತಿದೆಯೇ: ಹೈಕೋರ್ಟ್‌ ಪ್ರಶ್ನೆ

ಒತ್ತುವರಿ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 20:27 IST
Last Updated 15 ಸೆಪ್ಟೆಂಬರ್ 2022, 20:27 IST
.
.   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿಗೆ ಸಂಬಂಧಿದಂತೆ ಬೇರೆ ಯಾವುದಾದರೂ ಪ್ರಾಧಿಕಾರ ಪರ್ಯಾಯ ತನಿಖೆ ನಡೆಸುತ್ತಿದೆಯೇ’ ಎಂದು ಹೈಕೋರ್ಟ್‌ ಬಿಬಿಎಂಪಿಯನ್ನು ಪ್ರಶ್ನಿಸಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ರಾಜಕಾಲುವೆ ಒತ್ತುವರಿ ಪತ್ತೆ ಮತ್ತು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಮಳೆ ನೀರು ಹರಿದುಹೋಗಲು ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

ADVERTISEMENT

ಇದಕ್ಕೆ ನ್ಯಾಯಪೀಠ, ‘ಒತ್ತುವರಿ ತೆರವಿಗೆ ಸಂಬಂಧಿಸಿದ ಪ್ರಕ್ರಿಯೆ ಸ್ಥಗಿತವಾಗಿದೆಯೇ’ ಎಂದು ಪ್ರಶ್ನಿಸಿತಲ್ಲದೆ,‘ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳ ಕುರಿತಂತೆ ಮಾಹಿತಿ ನೀಡಿ’ ಎಂದು ನಿರ್ದೇಶಿಸಿತು.

‘ರಸ್ತೆ ಗುಂಡಿಗಳನ್ನು ಮುಚ್ಚಲು ಯಂತ್ರವನ್ನು ಬಳಸುತ್ತಿರುವ ದೇಶದ ಮೊದಲ ಪಾಲಿಕೆ ಎಂದು ಬೀಗುತ್ತಿರುವ ಬಿಬಿಎಂಪಿ,ಇಟ್ಟಿಗೆ ಚೂರು, ಸಿಮೆಂಟ್ ಬ್ಲಾಕ್‌ಗಳ ಚೂರುಗಳಿಂದ ಗುಂಡಿ ಮುಚ್ಚುತ್ತಿರುವ ಮಾದರಿದುರದೃಷ್ಟಕರ’ ಎಂದು ನ್ಯಾಯಪೀಠೆ ಅಸಮಾಧಾನ ವ್ಯಕ್ತಪಡಿಸಿದೆ. ‘ಗುತ್ತಿಗೆದಾರರು ಸಾರ್ವಜನಿಕರ ಸೇವೆ ಮಾಡುತ್ತಿಲ್ಲ. ಬದಲಿಗೆ ಹಣ ಮಾಡುತ್ತಿದ್ದು, ಬಿಬಿಎಂಪಿ ಅವರನ್ನು ನಿಯಂತ್ರಿಸಬೇಕು’ ಎಂದು ಮೌಖಿಕ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.