ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿ, ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದ ಆರೋಪದ ಅಡಿ ರೌಡಿಶೀಟರ್‌ಗಳೂ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ ಅಲಿಯಾಸ್ ಅಪ್ಪಿ, ಸೀನಾ ಅಲಿಯಾಸ್ ಬಾಂಬೆ ಸೀನಾ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಬಂಧಿತ ಆರೋಪಿಗಳು.
ಆಗಸ್ಟ್ 26ರಂದು ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿ ರಿಯಲ್ ಎಸ್ಟೇಟ್ ಉದ್ಯಮಿ ಎಚ್.ವಿ. ಮನೋಜ್ ಕುಮಾರ್ ಅವರನ್ನು ಆರೋಪಿಗಳು ಅಪಹರಿಸಿ ಹಣ ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
‘ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಉದ್ಯಮಿ ಮನೋಜ್ ಕುಮಾರ್ ಅವರಿಗೆ ಆರೋಪಿ ರಾಜೇಶ್ ಪರಿಚಯವಾಗಿದ್ದ. ಮನೋಜ್ ಅವರಿಂದ ₹1.20 ಲಕ್ಷ ಸಾಲ ಪಡೆದಿದ್ದ ರಾಜೇಶ್, ಆ ಹಣವನ್ನು ಸಿನಿಮಾ ನಿರ್ದೇಶಕರೊಬ್ಬರಿಗೆ ನೀಡಿದ್ದ. ಸಾಲ ವಾಪಸ್ ಕೊಡದಿದ್ದಾಗ ಮನೋಜ್ ಅವರು ಒತ್ತಡ ಹೇರಿದ್ದರು. ಆಗಸ್ಟ್ 26ರಂದು ಸಂಜೆ 6.30ಕ್ಕೆ ಹಣ ಕೊಡುವುದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯ ವೃತ್ತಕ್ಕೆ ಮನೋಜ್ ಕುಮಾರ್ ಅವರನ್ನು ರಾಜೇಶ್ ಕರೆಸಿಕೊಂಡಿದ್ದ. ಬಳಿಕ ದೊಡ್ಡವರು ಹಣ ಕೊಡುತ್ತಾರೆಂದು ಹೇಳಿ, ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದ. ಮಾರ್ಗ ಮಧ್ಯೆ ಮತ್ತೊಂದು ಕಾರಿನಲ್ಲಿ ಮನೋಜ್ ಕುಮಾರ್ ಅವರನ್ನು ಕೂರಿಸಿಕೊಂಡು ಆರೋಪಿಗಳು ಅಪಹರಿಸಿದ್ದರು’ ಎಂದು ಪೊಲೀಸರು ಹೇಳಿದರು.
ಹಣ ವರ್ಗಾವಣೆ: ನಗರದ ವಿವಿಧೆಡೆ ಸುತ್ತಾಡಿಸಿ ಬಳಿಕ ಚಾಕು ತೋರಿಸಿ ಬೆದರಿಸಿ ಮನೋಜ್ ಅವರ ಎರಡು ಖಾತೆಗಳಿಂದ ಒಟ್ಟು ₹2.96 ಲಕ್ಷ ವರ್ಗಾಯಿಸಿಕೊಂಡಿದ್ದರು. ಇನ್ನೂ ₹ 10 ಲಕ್ಷ ಕೊಡುವಂತೆ ಬೆದರಿಸಿದ್ದರು. ಎರಡು ದಿನ ಬಿಟ್ಟು ಹಣ ನೀಡುವುದಾಗಿ ಮನೋಜ್ ಭರವಸೆ ನೀಡಿದ್ದರಿಂದ, ಅವರನ್ನು ಜ್ಞಾನಭಾರತಿ ಕ್ಯಾಂಪಸ್ ಬಳಿ ಆರೋಪಿಗಳು ಬಿಟ್ಟು ಹೋಗಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.
ಬಳಿಕ ಮನೋಜ್‌ಕುಮಾರ್ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.