ವೀಲ್ ಚೇರ್
(ಐಸ್ಟೋಕ್ ಚಿತ್ರ)
ಬೆಂಗಳೂರು: ಅಂಗವಿಕಲರನ್ನು ಗುರುತಿಸಿ, ಅವರ ಮನೆ ಬಾಗಿಲಿಗೇ ಸೌಲಭ್ಯಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.
ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ, ಜಿಲ್ಲಾ ಪುನರ್ವವಸತಿ ಕೇಂದ್ರದ, ಜಿಲ್ಲಾ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಅಂಗವಿಕಲರಿಗೆ ಶೈಕ್ಷಣಿಕ, ಉದ್ಯೋಗ ಮತ್ತು ತರಬೇತಿ, ಸಾಮಾಜಿಕ ಭದ್ರತೆ ಹಾಗೂ ಪುನರ್ವಸತಿ ಸೇವೆಗಳನ್ನು ಅವರ ಮನೆ ಬಾಗಿಲಿನಲ್ಲೇ ಕಲ್ಪಿಸಲಾಗುತ್ತದೆ. ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಲ್ಲಾ ಪುನರ್ವವಸತಿ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಆ ಮೂಲಕ ಸೌಲಭ್ಯ ಪಡೆಯಬಹುದು ಎಂದರು.
ಬೆಂಗಳೂರು ನಗರ ಜಿಲ್ಲಾ ಪುನರ್ವಸತಿ ಯೋಜನೆಯನ್ನು ಕುಮಾರ ಪಾರ್ಕ್ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕೇಂದ್ರದಲ್ಲಿ ತಪಾಸಣಾ ಶಿಬಿರಗಳ ಮೂಲಕ ಅಂಗವಿಕಲರ ಸಮೀಕ್ಷೆ ಹಾಗೂ ಗುರುತಿಸುವಿಕೆ, ವೈಕಲ್ಯವನ್ನು ತಡೆಗಟ್ಟುವುದು, ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಮಾಡಿಸುವುದು, ಅಗತ್ಯ ಸಾಧನ ಸಲಕರಣೆಗಳನ್ನು ನೀಡುವುದು, ರಿಯಾಯಿತಿ ದರದ ಬಸ್ ಪಾಸ್, ಅಂಗವಿಕಲತೆಯ ನಿವಾರಣಾ ಶಸ್ತ್ರಚಿಕಿತ್ಸೆಗೆ ಮಾಹಿತಿ ನೀಡುವುದು ಹಾಗೂ ಇಲಾಖೆಯ ಎಲ್ಲಾ ಯೋಜನೆಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸೌಲಭ್ಯಗಳನ್ನು ಪಡೆಯಲು, ಜಿಲ್ಲಾ ಪುನರ್ವವಸತಿ ಕೇಂದ್ರ, ಕುಮಾರ ಪಾರ್ಕ್ ಟ್ರಸ್ಟ್ರಿ, ದೂರವಾಣಿ 080-41179472 ಅನ್ನು ಸಂಪರ್ಕಿಸಬಹುದು ಎಂದರು.
ಬೆಂಗಳೂರು ನಗರ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯಕ್, ಜಿಲ್ಲಾ ಅಂಗವಿಕಲಕರ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಕೆ, ಕುಮಾರ ಪಾರ್ಕ್ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ರಾಜು ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.