
ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯ ತಾವರೆಕೆರೆ ಒಂದನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾದಮ್ಮ (68), ಅವರ ಪುತ್ರಿ ಸುಧಾ (38) ಹಾಗೂ ಸುಧಾ ಅವರ ಪುತ್ರ ಮೌನೀಶ್(14) ಮೃತದೇಹ ಪತ್ತೆಯಾಗಿದೆ.
ಪುತ್ರನನ್ನು ಕೊಂದು ತಾಯಿ ಹಾಗೂ ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ, ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಹಾಗೂ ಸೊಕೊ ತಂಡದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಮಿಳುನಾಡಿನ ಧರ್ಮಪುರಿಯ ಕುಟುಂಬ ಒಂದೂವರೆ ವರ್ಷದಿಂದ ತಾವರೆಕೆರೆಯಲ್ಲಿ ವಾಸವಿತ್ತು. ಮಾದಮ್ಮ ಜತೆಗೆ ಪುತ್ರಿ ಸುಧಾ ಹಾಗೂ ಅವರ ಮೊಮ್ಮಗ ವಾಸವಿದ್ದರು. ಆರಂಭದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದ ತಾಯಿ, ಮಗಳು, ನಂತರ ಹಾಲಿನ ವ್ಯಾಪಾರದ ಜೊತೆಗೆ ಮನೆಗೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
‘ಸೋಮವಾರ ಬೆಳಿಗ್ಗೆ ಪೊಲೀಸ್ ಸಹಾಯವಾಣಿಗೆ ಬಂದ ಕರೆ ಆಧರಿಸಿ, ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೂವರ ಮೃತದೇಹ ಪತ್ತೆಯಾಗಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗೆಂದು ರವಾನಿಸಲಾಗಿದೆ. ತಮಿಳುನಾಡಿನಲ್ಲಿ ನೆಲಸಿರುವ ಸುಧಾ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಮೊದಲು ಪುತ್ರನಿಗೆ ವಿಷ ಕುಡಿಸಿ ಬಳಿಕ ತಾವೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದರು.
‘ಭಾನುವಾರ ಮೂವರೂ ಧರ್ಮಪುರಿ ಬಳಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಬಂದಿದ್ದರು. ನಂತರ, ಸಹೋದರಿಯೊಂದಿಗೂ ಮಾತನಾಡಿದ್ದರು. ಅದಾದ ಮೇಲೆ ಈ ಘಟನೆ ನಡೆದಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.
ಸಾಲದ ಕಾರಣಕ್ಕೆ ಆತ್ಮಹತ್ಯೆ: ‘ ಬಿರಿಯಾನಿ ಹೋಟೆಲ್ ನಡೆಸುವಾಗ ಸಾಲ ಮಾಡಿಕೊಂಡಿದ್ದರು. ಸಾಲ ವಿಪರೀತವಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.