ಸಾಂದರ್ಭಿಕ ಚಿತ್ರ
ಬೆಂಗಳೂರು: ಮಗನನ್ನು ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದ, ತಂದೆ ರವಿಕುಮಾರ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ 50ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಮಕ್ಕಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ. ಸಂತೋಷ್ ಅವರು ಆದೇಶಿಸಿದ್ದಾರೆ.
ರವಿಕುಮಾರ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಅಪರಾಧಿ ಪತ್ನಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮದ್ಯಪಾನ ಮಾಡಲು ಪ್ರತಿದಿನ ಹಣ ನೀಡುವಂತೆ ಪತ್ನಿಗೆ ಪೀಡಿಸುತ್ತಿದ್ದ. ಕೊಲೆಯಾದ ರವಿಕುಮಾರ್ ಮಗ ತೇಜಸ್ ಒಂಬತ್ತನೇ ತರಗತಿಯಲ್ಲಿ ಓದುವುದರ ಜೊತೆಗೆ ಹಾಲು ಮತ್ತು ಪೇಪರ್ ಹಾಕುವ ಕೆಲಸವನ್ನು ಮಾಡುತ್ತಿದ್ದ. ಮಗ ತೇಜಸ್ ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ ಎನ್ನುವ ಕಾರಣಕ್ಕೆ ರವಿಕುಮಾರ್ ತೇಜಸ್‌ನನ್ನು ಮರದ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ರವಿಕುಮಾರ್ ಪತ್ನಿ ಕುಮಾರ್‌ಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕುಮಾರ್‌ಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್ ಆರ್. ಅವರು ಈ ಪ್ರಕರಣದ ತನಿಖೆ ಕೈಗೊಂಡು, ಅಪರಾಧಿಯ ವಿರುದ್ಧ ಕಲಂ 103 ಬಿಎನ್‌ಎಸ್ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಸಿಸಿಎಚ್–51ರ ನ್ಯಾಯಾಧೀಶ ಸಿ.ಬಿ. ಸಂತೋಷ್ ವಿಚಾರಣೆ ನಡೆಸಿ, ಅಪರಾಧಿ ರವಿಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಪ್ರಕರಣವನ್ನು ಸರ್ಕಾರಿ ವಕೀಲರಾಗಿ ಬಿ.ಎಚ್. ಭಾಸ್ಕರ್ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.