
ಬೆಂಗಳೂರು: ವಿದೇಶದಲ್ಲಿ ಕುಳಿತು ನಗರದ ವಿಸ್ಡಮ್ ಫೈನಾನ್ಸ್‌ಗೆ ಸೇರಿದ ಹಲವು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ₹49 ಕೋಟಿ ವಂಚಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಇಸ್ಮಾಯಿಲ್ ರಶೀದ್ ಅತ್ತಾರ್ (27) ಹಾಗೂ ರಾಜಸ್ಥಾನದ ಉದಯಪುರದ ಸಂಜಯ್ ಪಾಟೀಲ್ (43) ಬಂಧಿತರು. ಬಂಧಿತರಿಂದ ಹಣ, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.
ವಿಸ್ಡಮ್ ಫೈನಾನ್ಸ್‌ನ ಹಿರಿಯ ವ್ಯವಸ್ಥಾಪಕ ಪ್ರಕಾಶ್ ಅವರು ಈ ಸಂಬಂಧ ದೂರು ನೀಡಿದ್ದರು. ಆಗಸ್ಟ್ 6 ಹಾಗೂ 7ರಂದು ರಾತ್ರಿ ಅನಧಿಕೃತ ಖಾತೆಗಳಿಗೆ ಫೈನಾನ್ಸ್ ಹಣವು ವರ್ಗಾವಣೆ ಆಗಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಆ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಕೃತ್ಯದಲ್ಲಿ ಇನ್ನೂ ಹಲವರ ಪಾತ್ರವಿರುವುದು ಕಂಡುಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ವಿದೇಶಿ ಐಪಿ ವಿಳಾಸ ಬಳಸಿ ಕಂಪನಿಯ ಖಾತೆಗಳಿಂದ 656 ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
‘ಎಂಟನೇ ತರಗತಿ ಓದಿರುವ ಸಂಜೀವ್ ಪಾಟೀಲ್ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಎಸ್‌ಎಸ್‌ಎಲ್‌ಸಿ ಓದಿರುವ ಇಸ್ಮಾಯಿಲ್ ರಶೀದ್ ಅತ್ತಾರ್ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ದುಬೈ, ಹಾಂಕಾಂಗ್ ಹಾಗೂ ಚೀನಾದಲ್ಲಿ ಕುಳಿತು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದವರಿಗೆ ಇಬ್ಬರೂ ನೆರವು ನೀಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ವಂಚನೆಗೆ ಬಳಸಲಾಗಿದ್ದ 600 ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಸ್ಥಗಿತಗೊಳಿಸಲಾಗಿದೆ. ಇದುವರೆಗೂ ₹10 ಕೋಟಿ ಹಣವನ್ನು ಹಿಂದಕ್ಕೆ ಪಡೆಯಲಾಗಿದೆ. ದುಬೈನಲ್ಲಿ ಕುಳಿತು ವಂಚನೆಯ ಜಾಲ ನಡೆಸುತ್ತಿದ್ದ ಭಾರತ ಮೂಲದ ಮತ್ತಿಬ್ಬರ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಅವರನ್ನೂ ಬಂಧಿಸುತ್ತೇವೆ ಎಂದು ಹೇಳಿದರು.
ವಂಚನೆಗಾಗಿ ವರ್ಚುವಲ್ ಪ್ರೈವೆಟ್ ನೆಟ್‌ವರ್ಕ್‌ನ ವಿಪಿಎನ್ ಬಳಸಿದ್ದ ಸೈಬರ್ ವಂಚಕರು, ಫೈನಾನ್ಸ್ ಕಂಪನಿಯ ಅಪ್ಲಿಕೇಶನ್‌ನ ಎಪಿಐ ಗೇಟ್‌ವೇ ದುರುಪಯೋಗ ಮಾಡಿಕೊಂಡಿದ್ದರು. ಈ ಕೃತ್ಯಕ್ಕಾಗಿ ಹಾಂಕಾಂಗ್, ಫಿಲಿಪ್ಪೀನ್ಸ್ ಮೂಲದ ಹ್ಯಾಕರ್ಸ್‌ಗಳನ್ನು ಬಳಸಿಕೊಂಡಿದ್ದರು. ಬಳಿಕ ಕಂಪನಿಯ ಖಾತೆಯಿಂದ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ನಂತರ, ಆ ಹಣ ವಂಚಕರ ಖಾತೆಗಳಿಗೆ ಜಮೆ ಆಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಆಂತರಿಕ ತನಿಖೆಯಿಂದ ಹಣ ವರ್ಗ ಪತ್ತೆ
ಮಾರತ್‌ಹಳ್ಳಿಯ ಹೊರವರ್ತುಲ ರಸ್ತೆಯಲ್ಲಿರುವ ಫೈನಾನ್ಸ್ ಕಂಪನಿಯ ಖಾತೆಗಳಿಗೆ ಸೈಬರ್ ವಂಚಕರು ಕನ್ನ ಹಾಕಿದ್ದರು. ಆಗಸ್ಟ್ 6 ಮತ್ತು 7ರಂದು ಕಂಪನಿಯ ಅನುಮತಿಯಿಲ್ಲದೇ ಕೆಲವು ಖಾತೆಗಳಿಗೆ ಅನಿಯಮಿತ ಮತ್ತು ಅನುಮಾನಾಸ್ಪದವಾಗಿ ₹47 ಕೋಟಿ ವರ್ಗಾವಣೆ ಆಗಿತ್ತು. ಆಗಸ್ಟ್ 7ರಂದು ಸಂಸ್ಥೆಯ ಅಧಿಕಾರಿಗಳು ಖಾತೆ ಪರಿಶೀಲಿಸಿದಾಗ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿತ್ತು. ಅದಾದ ಮೇಲೆ ಸಂಸ್ಥೆ ಆಂತರಿಕ ತನಿಖೆ ನಡೆಸಿತ್ತು. ತನಿಖೆ ನಡೆಸಿದಾಗ ವಿದೇಶಿ ಐಪಿ ವಿಳಾಸ ಬಳಸಿ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೋಚರಿಸಿತ್ತು. ಬಳಿಕ ಹಿರಿಯ ವ್ಯವಸ್ಥಾಪಕರು ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದೇ ಖಾತೆಗೆ ₹27 ಲಕ್ಷ ವರ್ಗ
ಸಂಜೀವ್ ಪಾಟೀಲ್‌ನನ್ನು ಬಂಧಿಸಿ ತನಿಖೆ ನಡೆಸಿದಾಗ ಆತನ ಹೆಸರಿನಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿದ್ದ ಖಾತೆಗೆ ₹27.39 ಲಕ್ಷ ವರ್ಗಾವಣೆ ಆಗಿರುವುದು ಪತ್ತೆಯಾಯಿತು. ತನಿಖೆ ಮುಂದುವರಿಸಿದಾಗ ಕಂಪನಿಗೆ ಸೇರಿದ ₹5.5 ಕೋಟಿಯನ್ನು ಹೈದಾರಾಬಾದ್‌ನ ಇಚಿಲೋನ್ ಸೈನ್ಸ್ ಟೆಕ್ ಸಂಸ್ಥೆಯ ಖಾತೆಗೆ ವರ್ಗಾಯಿಸಿ ನಂತರ ಫ್ಲಿಪೊ ಪೇ (ಐಡಿಎಫ್‌ಸಿ ಬ್ಯಾಂಕ್ ಖಾತೆಗೆ) ಖಾತೆಗೆ ವರ್ಗಾವಣೆ ಮಾಡಿರುವುದು ದೃಢಪಟ್ಟಿತ್ತು. ಇಚಿಲೋನ್ ಸೈನ್ಸ್ ಟೆಕ್ ಸಂಸ್ಥೆಯು ವೆಬ್‌ಯಾನೆ ಡಾಟಾ ಸೆಂಟರ್‌ಗೆ ಸೇರಿದ ಐಪಿ ವಿಳಾಸಗಳ ಮೂಲಕ ವ್ಯವಹಾರ ನಡೆಸಿದೆ. ಆ ಐಪಿ ವಿಳಾಸವನ್ನು ಮತ್ತೊಬ್ಬ ವ್ಯಕ್ತಿ ಖರೀದಿಸಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ಹೇಳಿದರು.
ದುಬೈ ವ್ಯಕ್ತಿಯ ಜತೆಗೆ ನಿಕಟ ಸಂಪರ್ಕ
ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ವಿವರ ಆಧರಿಸಿ ಸಂಜಯ್ ಪಾಟೀಲ್ ಹಾಗೂ ಇಸ್ಮಾಯಿಲ್ ರಶೀದ್ ಅತ್ತಾರ್ನನ್ನು ಬಂಧಿಸಲಾಗಿದೆ. ದುಬೈನಲ್ಲಿರುವ ವಂಚಕರ ತಂಡದೊಂದಿಗೆ ಇಸ್ಮಾಯಿಲ್ ನಿಕಟ ಸಂಪರ್ಕ ಹೊಂದಿರುವುದು ತನಿಖೆಯಿಂದ ಗೊತ್ತಾಗಿದೆ –ಸೀಮಾಂತ್‌ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.