ADVERTISEMENT

ಐವರು ಸಜೀವ ದಹನ ಪ್ರಕರಣ: ಕಟ್ಟಡದ ಇಬ್ಬರು ಮಾಲೀಕರ ಬಂಧನ, ಮುಂದುವರಿದ ತನಿಖೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 16:03 IST
Last Updated 17 ಆಗಸ್ಟ್ 2025, 16:03 IST
<div class="paragraphs"><p>ಪೊಲೀಸ್ (ಪ್ರಾತಿನಿಧಿಕ ಚಿತ್ರ)</p></div>

ಪೊಲೀಸ್ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ತಿಗಳರಪೇಟೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ ಐವರು ಮೃತಪಟ್ಟ ಪ್ರಕರಣ ಸಂಬಂಧ ಕಟ್ಟಡಗಳ ಇಬ್ಬರು ಮಾಲೀಕರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೃತನ ಸೋದರ ಗೋಪಾಲ್‌ ಸಿಂಗ್‌ ನೀಡಿದ ದೂರಿನ ಮೇರೆಗೆ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಕಟ್ಟಡ ಮಾಲೀಕರಾದ ಬಾಲಕೃಷ್ಣ ಶೆಟ್ಟಿ ಮತ್ತು ಸಂದೀಪ್‌ ಶೆಟ್ಟಿ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.

ADVERTISEMENT

ತಿಗಳರಪೇಟೆಯಲ್ಲಿ ಶನಿವಾರ ನಸುಕಿನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಗೃಹೋಪಯೋಗಿ ವಸ್ತುಗಳ ವ್ಯಾಪಾರಿ ಮದನ್‌ ಕುಮಾರ್‌ ಪುರೋಹಿತ್‌, ಪತ್ನಿ ಸಂಗೀತಾ, ಮಕ್ಕಳಾದ ಮಿಥೇಶ್‌, ವಿಹಾನ್‌ ಹಾಗೂ ಪಕ್ಕದ ಕಟ್ಟಡದ ಸುರೇಶ್‌ ಎಂಬುವವರು ಸಜೀವ ದಹನವಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಸುಮಾರು 15 ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ, ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದರು.

ಕಟ್ಟಡದ ನೆಲ ಮಹಡಿಯಲ್ಲಿದ್ದ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅವಘಡ ಸಂಭವಿಸಿರಬಹುದು. ಬೆಂಕಿಯ ಕೆನ್ನಾಲಿಗೆ ಬಹುಬೇಗನೆ ವ್ಯಾಪಿಸಿದ್ದರಿಂದ ಐವರು ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಟ್ಟಡಗಳಲ್ಲಿ ಪ್ರಾಥಮಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಘಟನಾ ಸ್ಥಳದಲ್ಲಿ ಕೆಲ ಮಾದರಿಗಳನ್ನು ಸಂಗ್ರಹಿಸಲಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ತನಿಖೆ ಬಳಿಕ ಮಾಹಿತಿ ಲಭ್ಯವಾಗಲಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಮಚ್ಚೀಂದ್ರ ತಿಳಿಸಿದ್ದಾರೆ.

‘ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ, ಕಿಟಕಿ, ಬೆಳಕಿನ ವ್ಯವಸ್ಥೆ ಸೂಕ್ತವಾಗಿರದೆ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿಯೇ ಅಗ್ನಿ ಅವಘಡ ಸಂಭವಿಸಿದಾಗ ಐವರ ಸಾವು ಸಂಭವಿಸಿದೆ’ ಎಂದು ಗೋಪಾಲ್ ಸಿಂಗ್ ದೂರು ನೀಡಿದ್ದರು.  

ಘಟನೆ ಸಂಭವಿಸಿದ್ದು ಹೇಗೆ?: ನಾಲ್ಕು ಅಂತಸ್ತಿನ ಕಟ್ಟಡದ ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಪ್ಲಾಸ್ಟಿಕ್ ಮ್ಯಾಟ್‌ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮು ಇತ್ತು. ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ಮದನ್ ಕುಮಾರ್ ಕುಟುಂಬ ವಾಸವಿತ್ತು. ನಾಲ್ಕನೇ ಮಹಡಿಯಲ್ಲಿ ಒಂದು ಕೊಠಡಿ ಇತ್ತು. 

ಅಗ್ನಿ ಅವಘಡ ಸಂಭವಿಸಿದಾಗ ಮದನ್ ಕುಮಾರ್ ಕುಟುಂಬ ಹಾಗೂ ಮೊದಲ ಮಹಡಿಯಲ್ಲಿನ ಗೋದಾಮಿನೊಳಗೆ ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು. ಮದನ್ ಕುಮಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.