
ಬೆಂಗಳೂರು: ಮಳೆಗಾಲದ ಸಮಯದಲ್ಲಿ ಉಂಟಾಗುವ ಜಲಾವೃತ ಪರಿಸ್ಥಿತಿಯನ್ನು ತಡೆಗಟ್ಟಲು, ನಗರ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರ ಕ್ರಮಗಳನ್ನು ಕೈಗೊಳ್ಳಲು ‘ಪ್ರವಾಹ ನಿರ್ವಹಣಾ ಸಮಿತಿ’ಯನ್ನು ರಚಿಸಲಾಗಿದೆ.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿಯಾದ ನಗರೀಕರಣ, ಮಳೆ ನೀರಿನ ಸರಾಗವಾಗಿ ಹರಿಯುವಿಕೆ ತೊಡಕುಗಳು, ರಾಜಕಾಲುವೆಗಳ ಆಕ್ರಮಣ, ಒಳಚರಂಡಿ ಸಮಸ್ಯೆಗಳು ಮತ್ತು ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಲ್ಲಿನ ಕೊರತೆ ಮುಂತಾದ ಕಾರಣಗಳಿಂದ ಜಲಾವೃತ ಸಮಸ್ಯೆಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು, ಆಯುಕ್ತರ ನೇತೃತ್ವದಲ್ಲಿ ನಗರ ಪಾಲಿಕೆ ಎಂಜಿನಿಯರಿಂಗ್ ವಿಭಾಗ, ಕೆಆರ್‌ಡಿಸಿಎಲ್, ಸಣ್ಣ ನೀರಾವರಿ, ಪೊಲೀಸ್ ಇಲಾಖೆ, ನೈರುತ್ಯ ರೈಲ್ವೆ, ಲೋಕೋಪಯೋಗಿ ಇಲಾಖೆ, ಬೆಸ್ಕಾಂ, ಜಿಲ್ಲಾ ವಿಪತ್ತು ನಿರ್ವಹಣೆ ಮತ್ತು ಇನ್ನಿತರೆ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ‘ಪ್ರವಾಹ ನಿರ್ವಹಣಾ ಸಮಿತಿ’ ರಚಿಸಲಾಗಿದೆ.
ನಗರ ಪಾಲಿಕೆಯ ಎಂಜಿನಿಯರಿಂಗ್ ವಿಭಾಗ, ಆರೋಗ್ಯ ಇಲಾಖೆ, ವಿಪತ್ತು ನಿರ್ವಹಣಾ ಘಟಕ ಮತ್ತು ಇತರೆ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಳೆಗಾಲದ ವೇಳೆ ಜನಜೀವನ ವ್ಯತ್ಯಯವಾಗದಂತೆ, ಸಾರ್ವಜನಿಕ ಸುರಕ್ಷತೆ ಹಾಗೂ ಮೂಲಸೌಕರ್ಯ ರಕ್ಷಣೆ ದೃಷ್ಟಿಯಿಂದ ಈ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದರು.
ಮಳೆಗಾಲದ ಪೂರ್ವ ಸಿದ್ಧತಾ ಕ್ರಮಗಳನ್ನು ಸಮನ್ವಯದಿಂದ ಅನುಷ್ಠಾನಗೊಳಿಸುವುದು.
ರಾಜಕಾಲುವೆ, ಮಳೆ ನೀರು ಕಾಲುವೆ ಮತ್ತು ಒಳಚರಂಡಿಗಳ ಶುದ್ಧೀಕರಣ ಹಾಗೂ ದುರಸ್ತಿ ಕಾರ್ಯಗಳ ಮೇಲ್ವಿಚಾರಣೆ.
ಜಲಾವೃತ ಪ್ರದೇಶಗಳನ್ನು ಗುರುತಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ರೂಪಿಸುವುದು.
ತುರ್ತು ಪರಿಸ್ಥಿತಿಯಲ್ಲಿ ತ್ವರಿತ ಪ್ರತಿಕ್ರಿಯಾ ವ್ಯವಸ್ಥೆ ರೂಪಿಸುವುದು.
ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು.
ಜಲಾವೃತ ಪ್ರದೇಶಗಳ ಮ್ಯಾಪಿಂಗ್ ಹಾಗೂ ಅಪಾಯ ಪ್ರದೇಶಗಳ ಗುರುತಿಸುವುದು.
ಮಳೆ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿರುವ ಅತಿಕ್ರಮಣವನ್ನು ತೆರವುಗೊಳಿಸುವುದು.
ನೀರು ನಿಲ್ಲುವ ಪ್ರದೇಶಗಳಲ್ಲಿ ಪಂಪ್‌ಗಳ ಅಳವಡಿಕೆ ಹಾಗೂ ತಾತ್ಕಾಲಿಕ ಪರಿಹಾರ ಕ್ರಮ.
ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಸಮನ್ವಯ.
ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳ ಕುರಿತು ತ್ವರಿತ ಕ್ರಮವಹಿಸುವುದು.
ರಸ್ತೆ ಕತ್ತರಿಸಲು ಅನುಮತಿ ಪಡೆದ ಎಲ್ಲಾ ಇಲಾಖೆಗಳು/ಸಂಸ್ಥೆಗಳು ನಿಗದಿತ ಅವಧಿಯೊಳಗೆ ಗುಣಮಟ್ಟದ ರಸ್ತೆ ಪುನಃಸ್ಥಾಪನೆ ಮಾಡುವುದು ಕಡ್ಡಾಯ. ರಸ್ತೆ ಪುನಃಸ್ಥಾಪನೆ ಕಾಮಗಾರಿಗಳನ್ನು ಎಂಜಿನಿಯರಿಂಗ್ ವಿಭಾಗದಿಂದ ತಾಂತ್ರಿಕವಾಗಿ ಪರಿಶೀಲಿಸಲಾಗುವುದು. ಮಾನದಂಡಗಳಿಗೆ ಅನುಗುಣವಾಗಿರದ ಕಾಮಗಾರಿಗಳನ್ನು ನಡೆಸಿದವರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಪುನಃಸ್ಥಾಪನೆ ಸಂದರ್ಭದಲ್ಲಿ ಉತ್ತಮ ಗುಣಮಟ್ಟದೊಂದಿಗೆ ರಸ್ತೆ ಸಮತಟ್ಟಾಗಿರುವಂತೆ ಹಾಗೂ ಮಳೆ ನೀರು ನಿಲ್ಲದಂತೆ ತಾಂತ್ರಿಕ ಕ್ರಮ ಅನುಸರಿಸಬೇಕು. ಪುನಃಸ್ಥಾಪನೆ ಬಳಿಕ ನಿರ್ದಿಷ್ಟ ಅವಧಿಯೊಳಗೆ ರಸ್ತೆ ಕುಸಿತ ಕಂಡುಬಂದಲ್ಲಿ ಸಂಬಂಧಿತ ಸಂಸ್ಥೆಯೇ ಜವಾಬ್ದಾರಿಯಾಗಿರುತ್ತದೆ. ಸುಗಮ ಸಂಚಾರ ಕಾಪಾಡುವುದು, ಅಪಘಾತಗಳನ್ನು ತಡೆಯುವುದು, ರಸ್ತೆ ಗುಣಮಟ್ಟ ಹಾಗೂ ದೀರ್ಘಾಯುಷ್ಯ ಹೆಚ್ಚಿಸುವ ಮೂಲಕ ಮೂಲಸೌಕರ್ಯ ಸುಧಾರಣೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುವುದು ‘ರಸ್ತೆ ಪುನಃ ಸ್ಥಾಪನೆ’ ಸಮಿತಿ ಕಾರ್ಯಗಳಾಗಿವೆ ಎಂದರು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಕೈಗೊಳ್ಳಲಿದ್ದಾರೆ. ನಂತರ, ಆಯಾ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ‘ಸಾರ್ವಜನಿಕ ಸಂಪರ್ಕ ಸಭೆ’ ನಡೆಸಲಿದ್ದಾರೆ.
ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ನಗರ ಪಾಲಿಕೆಗಳಲ್ಲಿ ಸಾರ್ವಜನಿಕರ ಅಹವಾಲುಗಳು ಮತ್ತು ಮನವಿಗಳನ್ನು ನೇರವಾಗಿ ಸ್ವೀಕರಿಸಿ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಮೂಲಸೌಕರ್ಯ, ರಸ್ತೆ, ಸ್ವಚ್ಛತೆ, ಒಳಚರಂಡಿ ಸಮಸ್ಯೆಯ ಅಹವಾಲುಗಳನ್ನು ಖುದ್ದಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಂಡು ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಲಾಗುವುದು. ‘ಸಾರ್ವಜನಿಕ ಸಂಪರ್ಕ’ ಸಭೆಯಲ್ಲಿ ಆಯಾ ನಗರ ಪಾಲಿಕೆಯ ಆಯುಕ್ತರು, ಅಭಿವೃದ್ಧಿ/ಕಂದಾಯ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ವಿವಿಧ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿರುತ್ತಾರೆ.
ಕೇಂದ್ರ ನಗರ ಪಾಲಿಕೆಯಲ್ಲಿ (ಸಂಪರ್ಕ 94806 85702) ಫೆ.26ರಂದು ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಸಾರ್ವಜನಿಕ ಸಂಪರ್ಕ ಸಭೆ ನಡೆಯಲಿದೆ. ಅದಕ್ಕೂ ಮುನ್ನ, ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿವಿಧ ಕಚೇರಿಗಳಿಗೆ ಮುಖ್ಯ ಆಯುಕ್ತರು ಭೇಟಿ ನೀಡಲಿದ್ದಾರೆ.
ಪೂರ್ವ ನಗರ ಪಾಲಿಕೆಯಲ್ಲಿ ಮಾರ್ಚ್ 3ರಂದು, ಪಶ್ಚಿಮ ನಗರ ಪಾಲಿಕೆಯಲ್ಲಿ ಮಾರ್ಚ್ 5ರಂದು, ಉತ್ತರ ನಗರ ಪಾಲಿಕೆಯಲ್ಲಿ ಮಾರ್ಚ್ 10 ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಮಾರ್ಚ್ 12ರಂದು ಸಾರ್ವಜನಿಕ ಸಂಪರ್ಕ ಸಭೆ ನಡೆಯಲಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಜನಸಂಖ್ಯೆ ನಿಯಂತ್ರಣ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮವನ್ನು ಮಾರ್ಗಸೂಚಿಗಳಂತೆ ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಕಾರ್ಯಕ್ರಮದಡಿ ಬೀದಿ ನಾಯಿಗಳನ್ನು ಮಾನವೀಯ ರೀತಿಯಲ್ಲಿ ಹಿಡಿದು, ಅರ್ಹ ಪಶುವೈದ್ಯರಿಂದ ಶಸ್ತ್ರಚಿಕಿತ್ಸೆ ಹಾಗೂ ರೇಬೀಸ್ ನಿರೋಧಕ ಲಸಿಕೆ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ನಾಯಿಗಳಿಗೆ ಅಗತ್ಯವಾದ ಆರೈಕೆ ಮತ್ತು ಚೇತರಿಕೆ ಒದಗಿಸಿ ನಂತರ ನಿಯಮಾನುಸಾರ ಮರುಬಿಡುಗಡೆ ಮಾಡಲಾಗುತ್ತದೆ.
ಎಬಿಸಿ ಕಾಯ್ದೆ– 2023ರ ನಿಯಮಾನುಸಾರ ಶಸ್ತ್ರಚಿಕಿತ್ಸೆಯಾದ ಬೀದಿ ನಾಯಿಗಳನ್ನು ಅವುಗಳನ್ನು ಹಿಡಿದ ಮೂಲ ಸ್ಥಳದಲ್ಲಿಯೇ ಮರುಬಿಡುಗಡೆ ಮಾಡುವುದು ಕಡ್ಡಾಯವಾಗಿದೆ. ಶಸ್ತ್ರಚಿಕಿತ್ಸೆಯಾದ ನಂತರ ಕಿವಿಯಲ್ಲಿ ಗುರುತು ಹೊಂದಿರುವ ಬೀದಿ ನಾಯಿಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಇಂತಹ ನಾಯಿಗಳಿಗೆ ಹಾನಿ ಮಾಡುವುದು ಅಥವಾ ಬೇರೆ ಸ್ಥಳಕ್ಕೆ ಕೊಂಡೊಯ್ಯುವುದು ಕಾನೂನುಬಾಹಿರವಾಗಿದೆ. ಈ ನಿಟ್ಟಿನಲ್ಲಿ ನಾಗರಿಕರು ಸಹಕರಿಸಬೇಕು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಮನವಿ ಮಾಡಿಕೊಂಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.