ಬೆಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಹಾಗೂ ಆತನ ಸ್ನೇಹಿತೆಯಾಗಿದ್ದ ಸ್ಥಳೀಯ ನಿವಾಸಿಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾದ ಮಿಖಾಯಿಲ್ ಡೈಕೆ ಒಕೋಲಿ (41) ಹಾಗೂ ಬೆಂಗಳೂರಿನ ಸಹನಾ ದಾಸ್ (25) ಎಂಬುವರನ್ನು ಬಂಧಿಸಿ, ₹1.50 ಕೋಟಿ ಮೌಲ್ಯದ 1 ಕೆ.ಜಿ 50 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರ, ಮೂರು ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ. 2018ರಲ್ಲಿ ವ್ಯಾವಹಾರಿಕ ವೀಸಾ ಅಡಿಯಲ್ಲಿ ಭಾರತಕ್ಕೆ ಬಂದಿದ್ದ ಒಕೋಲಿ ವಿರುದ್ದ ಕೆ.ಆರ್.ಪುರಂ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.
ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಜುಲೈನಲ್ಲಿ ನೈಜೀರಿಯಾ ಮೂಲದ ಚುಕುದ್ವೇಮ್ ಜಸ್ಟೀಸ್ ನ್ವಾಫಾರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ 4 ಕೆ.ಜಿ ಎಂಡಿಎಂಎ ಕ್ರಿಸ್ಟೆಲ್‌ಗಳನ್ನು ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಆರೋಪಿಯು, ಮಿಖಾಯಿಲ್ ಡೈಕೆ ಒಕೋಲಿಯಿಂದ ಎಂಡಿಎಂಎ ಖರೀದಿಸಿದ್ದಾಗಿ ತಿಳಿಸಿದ್ದ.
ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ವಾಸವಾಗಿದ್ದ ಆರೋಪಿಗಳಿಬ್ಬರನ್ನೂ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ವಿವರಿಸಿದರು.
ಈ ಹಿಂದೆ ಕೆ. ಆರ್. ಪುರಂನಲ್ಲಿ ವಾಸವಿದ್ದ ಮಿಖಾಯಿಲ್‌ಗೆ ಪಕ್ಕದ ಮನೆಯ ಸಹನಾಳ ಪರಿಚಯವಾಗಿತ್ತು. ಬಳಿಕ ಇಬ್ಬರೂ ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಸಹ ಜೀವನ ನಡೆಸುತ್ತಿದ್ದರು. ಸಹನಾ ದಾಸ್ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.