ADVERTISEMENT

ಗಣೇಶ ಚತುರ್ಥಿ: ಬೆಂಗಳೂರು ನಗರದಾದ್ಯಂತ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 15:20 IST
Last Updated 25 ಆಗಸ್ಟ್ 2025, 15:20 IST
ಸೀಮಂತ್‌ ಕುಮಾರ್ ಸಿಂಗ್‌ 
ಸೀಮಂತ್‌ ಕುಮಾರ್ ಸಿಂಗ್‌    

ಬೆಂಗಳೂರು: ನಗರದಲ್ಲಿ ಗೌರಿ–ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಗಣೇಶಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಗೆ ಸೂಕ್ತ ಬಂದೋಬಸ್ತ್‌ ಕೈಗೊಳ್ಳುವಂತೆ ನಗರ ಪೊಲೀಸ್‌ ಕಮಿಷನರ್ ಸೀಮಂತ್‌ ಕುಮಾರ್ ಸಿಂಗ್ ಅವರು ನಗರದ ಎಲ್ಲ ಉಪ ವಿಭಾಗಗಳ ಡಿಸಿಪಿಗಳು, ಎಸಿಪಿಗಳು ಹಾಗೂ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈದ್ ಮಿಲಾದ್‌ ಹಬ್ಬವೂ ಸಮೀಪಿಸುತ್ತಿದ್ದು, ನಗರದಾದ್ಯಂತ ಬಂದೋಬಸ್ತ್‌ ಕೈಗೊಳ್ಳಬೇಕು ಎಂದು ಪೊಲೀಸ್‌ ಕಮಿಷನರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ.  

ಸಣ್ಣಪುಟ್ಟ ಅವಘಡಗಳೂ ಆಗದಂತೆ ನೋಡಿಕೊಳ್ಳಬೇಕು. ಸಣ್ಣ ಅಹಿತಕರ ಘಟನೆ ಜರುಗಿದರೂ ತಕ್ಷಣವೇ ಇನ್‌ಸ್ಪೆಕ್ಟರ್‌ಗಳು ಸ್ಥಳಕ್ಕೆ ತೆರಳಿ, ಪರಿಸ್ಥಿತಿ ನಿಯಂತ್ರಿಸಬೇಕು. ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳ ಬಳಿ ಪೊಲೀಸರನ್ನು ನಿಯೋಜಿಸಿ, ಆಯೋಜಕರೊಂದಿಗೆ ಸಂಪರ್ಕದಲ್ಲಿ ಇರಬೇಕು. ಸೂಕ್ಷ್ಮ ಸ್ಥಳಗಳಲ್ಲಿ ಅಗ್ನಿ ಶಾಮಕ ವಾಹನಗಳ ಜತೆಗೆ ಪೊಲೀಸ್ ಸಿಬ್ಬಂದಿಯನ್ನೂ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ತಿಳಿಸಿದ್ದಾರೆ. 

ADVERTISEMENT

ಬೆಸ್ಕಾಂ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇರಬೇಕು. ಈ ಹಿಂದೆ ಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಯಾವುದಾದರೂ ಘಟನೆಗಳು ನಡೆದಿದ್ದರೆ ಅಂತಹ ಸ್ಥಳಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದರು.

ಅದೇ ರೀತಿ ಈದ್‌ ಮಿಲಾದ್‌ ಹಬ್ಬದ ಸಂದರ್ಭದಲ್ಲೂ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಮಾಡಿಕೊಳ್ಳಬೇಕು. ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಬೇಕು. ಸಣ್ಣಪುಟ್ಟ ಗಲಾಟೆಗಳು ನಡೆದರೆ ಆರಂಭಿಕ ಹಂತದಲ್ಲೇ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲಾ ವಿಭಾಗಗಳ ಡಿಸಿಪಿಗಳು, ಎಸಿಪಿಗಳು, ಜಂಟಿ ಪೊಲೀಸ್‌ ಕಮಿಷನರ್‌, ಹೆಚ್ಚುವರಿ ಕಮಿಷನರ್‌ಗಳು ಸಭೆಯಲ್ಲಿ ಹಾಜರಿದ್ದರು. 

677 ಪ್ರಕರಣ ದಾಖಲು

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿದ 667 ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ವಿವಿಧ ಮಾದರಿಯ 47749 ವಾಹನಗಳನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ 53 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ 90 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ₹90 ಸಾವಿರ ದಂಡ ಸಂಗ್ರಹಿಸಲಾಗಿದೆ.

12 ಸಾವಿರ ಪ್ರಕರಣ ದಾಖಲು

ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದ ವಾಹನ ಸವಾರರ ವಿರುದ್ಧ ಆಗಸ್ಟ್‌ 18ರಿಂದ 24ರ ವರೆಗೆ ಕಾರ್ಯಾಚರಣೆ ನಡೆಸಿ ಸಂಚಾರ ಪೊಲೀಸರು ಪಾರ್ಕಿಂಗ್‌ ನಿಯಮ ಉಲ್ಲಂಘಿಸಿದ 12097 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.