ಬೆಂಗಳೂರು: 21 ಕ್ಯಾರೆಟ್ ಚಿನ್ನದ ಆಭರಣಗಳನ್ನು ಪಡೆದು ಅದರ ಬದಲಿಗೆ 24 ಕ್ಯಾರೆಟ್ ಚಿನ್ನದ ಗಟ್ಟಿಗಳನ್ನು ನೀಡುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸರ್ಜಾಪುರ ರಸ್ತೆಯ ಮಾಲೂರು ಗ್ರಾಮದ ಮೋಹನ್ ಲಾಲ್ (32) ಬಂಧಿತ ಆರೋಪಿ.
ನಗರ್ತಪೇಟೆಯ ನಿವಾಸಿ ಹುಸೇನ್ ಅಲಿ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ನಗರ್ತಪೇಟೆಯಲ್ಲಿ ಹುಸೇನ್ ಅಲಿ ಅವರು ಚಿನ್ನದ ಆಭರಣ ತಯಾರಿಸುವ ಅಂಗಡಿ ಇಟ್ಟುಕೊಂಡಿದ್ದಾರೆ. ಅವರಿಗೆ ಮೂರು ತಿಂಗಳ ಹಿಂದೆ ಆರೋಪಿ ಪರಿಚಯವಾಗಿದ್ದ. ಆತ ಚಿನ್ನದ ಸಗಟು ವ್ಯಾಪಾರ ನಡೆಸುವುದಾಗಿ ತಿಳಿಸಿದ್ದ. ತಮ್ಮಲ್ಲಿರುವ 21 ಕ್ಯಾರೆಟ್‌ನ (916 ಗೋಲ್ಡ್) ಚಿನ್ನಾಭರಣ ನೀಡಿದರೆ ಅದೇ ತೂಕದ 24 ಕ್ಯಾರೆಟ್ (999 ಗೋಲ್ಡ್) ಪರಿಶುದ್ಧವಾದ ಚಿನ್ನದ ಗಟ್ಟಿಯನ್ನು ನೀಡುವುದಾಗಿ ಆರೋಪಿ ನಂಬಿಸಿದ್ದ. ಆತನ ಮಾತು ನಂಬಿದ್ದ ದೂರುದಾರರು, 1 ಕೆಜಿ 537 ಗ್ರಾಂ ತೂಕದ 21 ಕ್ಯಾರೆಟ್ ಚಿನ್ನಾಭರಣ ನೀಡಿದ್ದರು. ಚಿನ್ನಾಭರಣ ಪರಿಶೀಲಿಸಿ, ತರುವುದಾಗಿ ಹೇಳಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.
ಹುಸೇನ್ ಅಲಿ ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ, ದಾಸರಹಳ್ಳಿಯ ಕಲ್ಯಾಣ ನಗರದ 10ನೇ ಕ್ರಾಸ್‌ನ ಮನೆಯಲ್ಲಿ ಆರೋಪಿ ಬಚ್ಚಿಟ್ಟುಕೊಂಡಿದ್ದ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.