ADVERTISEMENT

₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಆರೋಪಿ ದಂಪತಿ ಪತ್ತೆಗೆ 7 ಪೊಲೀಸ್ ತಂಡ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 16:03 IST
Last Updated 2 ಫೆಬ್ರುವರಿ 2026, 16:03 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಕೆಂಪಾಪುರ ರಸ್ತೆಯ ಯಮಲೂರಿನ ಬಿಲ್ಡರ್‌ ಎಂ.ಆರ್.ಶಿವಕುಮಾರ್ ಅವರ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿಯ ಪತ್ತೆಗೆ ಏಳು ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ಆರೋಪಿತ ದಂಪತಿ, ಮಹಾರಾಷ್ಟ್ರದಲ್ಲೂ ಇದೇ ಮಾದರಿಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡಿರುವ ಸಂಗತಿ ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ಎಂ.ಆರ್.ಶಿವಕುಮಾರ್ ಅವರ ಮನೆಯಲ್ಲಿ ಜ.25ರಂದು ಚಿನ್ನ ಹಾಗೂ ವಜ್ರದ ಆಭರಣಗಳನ್ನು ನೇಪಾಳದ ದಿನೇಶ್ (32) ಮತ್ತು ಅವರ ಪತ್ನಿ ಕಮಲಾ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು ದೆಹಲಿ, ಮುಂಬೈ, ಕೊಲ್ಕತ್ತ, ಪುಣೆ, ನೇಪಾಳದ ಗಡಿಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಇದುವರೆಗೂ ಆರೋಪಿಗಳ ಪತ್ತೆ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಈ ದಂಪತಿ 2025ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಿವೃತ್ತ ಅಧಿಕಾರಿಯೊಬ್ಬರ ಮನೆಯಲ್ಲಿ ದಿನೇಶ್‌ ಮತ್ತು ಸಲೀನಾ ಎಂಬ ಹೆಸರಿನಲ್ಲಿ ಕೆಲಸಕ್ಕೆ ಸೇರಿಕೊಂಡು ₹16 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಆ ಬಳಿಕ ಬೆಂಗಳೂರಿಗೆ ಬಂದು ಬಿಲ್ಡರ್‌ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ನೇಪಾಳದ ಮಾಯಾ ಹಾಗೂ ವಿಕಾಸ್ ದಂಪತಿ ಬಿಲ್ಡರ್‌ ಮನೆಯಲ್ಲಿ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದರು. ಊರಿಗೆ ಹೋಗುವುದಾಗಿ ಹೇಳಿ ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು. ಅದಾದ ಮೇಲೆ ಅವರೇ ನೇಪಾಳದ ದಿನೇಶ್ ಹಾಗೂ ಕಮಲಾ ಅವರನ್ನು ಬಿಲ್ಡರ್ ಶಿವಕುಮಾರ್ ಮನೆಯಲ್ಲಿ ಕೆಲಸಕ್ಕೆ ಸೇರಿಸಿದ್ದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.