ADVERTISEMENT

ಹಸಿರು ಬೆಂಗಳೂರು: ಪರಿಸರ ಸಮತೋಲನಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 19:15 IST
Last Updated 12 ಆಗಸ್ಟ್ 2025, 19:15 IST
ಬೆಂಗಳೂರು ಹಸಿರು
ಬೆಂಗಳೂರು ಹಸಿರು   

ಬೆಂಗಳೂರು: ಹಸಿರು ಬೆಂಗಳೂರಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ಪ್ರಯತ್ನಗಳು ಅರಣ್ಯ, ಪರಿಸರ ಇಲಾಖೆಯಿಂದ ಶುರುವಾಗಿವೆ.

ಕರ್ನಾಟಕ ಅರಣ್ಯ ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನದ ಮೂಲಕ ಬೆಂಗಳೂರು ನಗರದಲ್ಲಿ ಜಲಸಂರಕ್ಷಣೆ, ಹಸಿರು ಹೊದಿಕೆ ಪ್ರಮಾಣ ಹೆಚ್ಚಳ, ಸದ್ಯ ಇರುವ ಅರಣ್ಯ ರಕ್ಷಣೆ, ಪರಿಸರ ಮಾಲಿನ್ಯ ತಗ್ಗಿಸುವ ನೀಲನಕ್ಷೆ ತಯಾರಿಸಿ ಖಾಸಗಿ ಸಹಭಾಗಿತ್ವ ಪಡೆಯುವುದಕ್ಕೆ ಒತ್ತು ನೀಡಲಾಗಿದೆ.

ಅರಣ್ಯ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಉತ್ತೇಜಿಸಲು ಮಂಗಳವಾರ ನಗರದಲ್ಲಿ ನಡೆದ ಪಾಲುದಾರರ ಪ್ರಥಮ ಸಮ್ಮೇಳನ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ, ಬೆಂಗಳೂರು ನಗರದಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಸಂಬಂಧ ಅಧ್ಯಯನ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜಧಾನಿಯ ಜನಸಂಖ್ಯೆ 1.50 ಕೋಟಿ ಸಮೀಪಿಸುತ್ತಿದೆ. ದೆಹಲಿಯ ರೀತಿ ಗ್ಯಾಸ್ ಛೇಂಬರ್ ಆಗದಂತೆ ಕರ್ನಾಟಕ ರೂಪಿಸಿರುವ ಯೋಜನೆಗಳ ಜಾರಿಗೆ ಸಾಂಸ್ಥಿಕ ಸಂಸ್ಥೆಗಳು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಲಾಲ್‌ಬಾಗ್, ಕಬ್ಬನ್ ಪಾರ್ಕ್ ನಿರ್ಮಾಣವಾಗಿ ಶತಮಾನಗಳು ಕಳೆದಿವೆ. ಆ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನವಾಗಿರಲಿಲ್ಲ. ಈಗ ಯಲಹಂಕ ಬಳಿಯ ಮಾದಪ್ಪನ ಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ₹250 ಕೋಟಿ  ವೆಚ್ಚದಲ್ಲಿ ಜೈವಿಕ ಉದ್ಯಾನ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದರು.

ಹವಾಮಾನ ವೈಪರಿತ್ಯಗಳ ನಿರ್ವಹಣೆ ಯೋಜನೆ ಮಂಡಿಸಿದ ಎಪಿಸಿಸಿಎಫ್‌ ವಿಜಯಮೋಹನರಾಜ್‌, ಬೆಂಗಳೂರಿನಲ್ಲಿ ಅಂದಾಜು 12ರಿಂದ 14 ಲಕ್ಷ ಮರಗಳಿವೆ. ಅವುಗಳಿಗೆ ಆಧಾರ್‌ ಮಾದರಿಯಲ್ಲಿಯೇ ಗುರುತು ನೀಡುವ ಯೋಜನೆಯೂ ಇದೆ. ಸ್ಮಾರ್ಟ್‌ ಟೀ ಟ್ಯಾಗ್‌ನಿಂದ ಮರ ಸಂರಕ್ಷಣೆ ವ್ಯವಸ್ಥಿತವಾಗಿ ಸಾಧ್ಯವಾಗಲಿದೆ. ಬೆಂಗಳೂರು ಸುತ್ತಮುತ್ತ 27900 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. 900 ಕಿ.ಮಿ ಅರಣ್ಯ ಗಡಿಯಿದೆ. ಬೆಂಗಳೂರು ಜಲಮೂಲ ಉಳಿಸಲು ಮರಗಳು, ಅರಣ್ಯ ಪಾತ್ರವೂ ಹಿರಿದು ಎಂದರು.

ಅನ್‌ ಬಾಕ್ಸಿಂಗ್‌ ಯೋಜನೆ ರೂಪಿಸಿದ ಉದ್ಯಮಿ ಪ್ರಶಾಂತ್‌ ಪ್ರಕಾಶ್‌, ಬೆಂಗಳೂರಿನ 100 ಕೆರೆಗಳ ಸಂರಕ್ಷಣೆಗೆ ನಮ್ಮ ಪ್ರಯತ್ನ ನಡೆದಿದೆ. 100 ಸೂಕ್ಷ್ಮ ಅರಣ್ಯ ಪ್ರದೇಶ ರಚನೆಗೆ ಪೂರಕವಾಗಿ ಸಸಿ ನೆಡುವ ವಿಸ್ತೃತ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಉದ್ಯಮಿಗಳ ಗುಂಪು ಇದಕ್ಕಾಗಿ ಕೆಲಸ ಮಾಡುತ್ತಿದ್ದು. ಅರಣ್ಯ ಇಲಾಖೆ ಫೌಂಡೇಷನ್‌ ಮೂಲಕವೂ ಸಹಭಾಗಿತ್ವ ಹೊಂದಲಿದೆ ಎಂದರು.

ಐಸಿಐಸಿಐ ಫೌಂಡೇಷನ್‌ನ ವೆಂಕಟೇಶ್‌, ಡಬ್ಲುಎಂಜಿಯ ಶ್ರೀಧರ್‌ ಅವರು ತಮ್ಮ ಸಂಸ್ಥೆ ಕೈಗೊಂಡ ಸಹಭಾಗಿತ್ವದ ವಿವರಣೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.