ADVERTISEMENT

ಬೆಂಗಳೂರು| ನಗರ ವಿಸ್ತರಣೆಯಿಂದ ಅಂತರ್ಜಲ ಮಟ್ಟ ಕುಸಿತ: ಉಮಾ ಮಹಾದೇವನ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 14:29 IST
Last Updated 11 ಅಕ್ಟೋಬರ್ 2025, 14:29 IST
   

ಬೆಂಗಳೂರು: ‘ಆರ್ಥಿಕ ಬೆಳವಣಿಗೆಗೆ ನಗರಗಳ ತ್ವರಿತ ವಿಸ್ತರಣೆ ಅಗತ್ಯ. ಆದರೆ ಈ ಪ್ರಕ್ರಿಯೆ ಅಂತರ್ಜಲ ಮಟ್ಟವನ್ನು ಕಡಿಮೆ ಮಾಡಿದೆ’ ಎಂದು ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್‌ ಹೇಳಿದರು.

ಅಂತರ್ಜಲ ಮಟ್ಟ ಕುಸಿತ, ಕೆರೆಗಳ ನಾಶ ಮತ್ತು ಕಾವೇರಿ ನದಿಯ ಮೇಲೆ ಅತಿಯಾದ ಅವಲಂಬನೆಯೊಂದಿಗೆ, ಬೆಂಗಳೂರಿನ ನೀರಿನ ಬಿಕ್ಕಟ್ಟು ಹದಗೆಡುತ್ತಿರುವ ವಿಷಯಗಳ ಕುರಿತು ದಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿದ್ದ ‘ಸುವರ್ಣಮುಖಿ ನದಿ ಪುನರುಜ್ಜೀವನ ಜಾಗೃತಿ ಮತ್ತು ಕ್ರಿಯಾ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘65 ದಶಲಕ್ಷ ಘನ ಅಡಿ ಸಂಗ್ರಹ ಸಾಮರ್ಥ್ಯದೊಂದಿಗೆ 216 ಚದರ ಕಿಲೋಮೀಟರ್ ಅರೆ–ನಗರ ಪ್ರದೇಶವನ್ನು ಒಳಗೊಂಡಿರುವ ಸುವರ್ಣಮುಖಿ ಜಲಾಶಯ ಮತ್ತು ಅದರ 110 ಸಂಬಂಧಿತ ಜಲಮೂಲಗಳು, 332 ಹೊಳೆಗಳಿಂದ ಅಂತರ್ಜಲ ಮರುಪೂರಣಗೊಳಿಸಬಹುದು. ಸುತ್ತಮುತ್ತಲಿನ 69 ಹಳ್ಳಿಗಳಿಗೆ ಸುಸ್ಥಿರ ನೀರಿನ ಮೂಲವಾಗಬಹುದು. ಈ ಯೋಜನೆಯು ಕರ್ನಾಟಕಕ್ಕೆ ಮಾತ್ರವಲ್ಲದೆ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ’ ಎಂದರು.

ADVERTISEMENT

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಶ್ ಚಂದ್ರ ರೇ, ‘ಈ ಯೋಜನೆಯಲ್ಲಿ, ಗೇಟೆಡ್ ಸಮುದಾಯಗಳು ಮತ್ತು ಆರ್‌ಡಬ್ಲ್ಯುಎ ನಿವಾಸಿಗಳ ಭಾಗವಹಿಸುವಿಕೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ನೀರಿನ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವಾಗ ಜೀವವೈವಿಧ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲಾಗಿರುವ ಕುರಿತು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದರು.

ಭೂವಿಜ್ಞಾನಿ ವೈ. ಲಿಂಗರಾಜು ಅವರು, ‘ನಗರಾಭಿವೃದ್ಧಿಯ ಹೆಸರಿನಲ್ಲಿ, ಪ್ರಕೃತಿ ಅಳುತ್ತಿದೆ. ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ನೈಸರ್ಗಿಕ ಸುಸ್ಥಿರತೆ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಐಐಎಂ ಬೆಂಗಳೂರಿನ ಪ್ರೊ. ಗೋಪಾಲ್ ನಾಯಕ್, ಪಂಜಾಬ್‌ನ ಜಲ ಸಂರಕ್ಷಣಾವಾದಿ ಜಗಜೀತ್ ಸಿಂಗ್ ಕೊಚಾರ್, ಭಾಗೀರಥ್ ಎನ್‌ಜಿಒ ಅಧ್ಯಕ್ಷ ಪ್ರಕಾಶ್ ಕುಲಕರ್ಣಿ ಮತ್ತು ಪೃಥ್ವಿ ಇಕೋ ಸೈನ್ಸಸ್‌ನ ಕ್ರಿಸ್ ಮಧುಸೂದನ್ ಅವರು ಜಲಮಾಲಿನ್ಯವನ್ನು ತಗ್ಗಿಸಲು ನವೀನ ಪ್ರಕೃತಿ ಆಧಾರಿತ ವಿಧಾನಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.