ಬೆಂಗಳೂರು: ಜಗಳ ಬಿಡಿಸಲು ಹೋದ ಹೆಡ್ ಕಾನ್ಸ್ಟೆಬಲ್ ಮೇಲೆ ಡ್ಯಾಗರ್‌ನಿಂದ ಹಲ್ಲೆ ನಡೆಸಿರುವ ಘಟನೆ ಚಾಮರಾಜಪೇಟೆಯ ವಾಲ್ಮೀಕಿ ನಗರದಲ್ಲಿ ನಡೆದಿದ್ದು, ಘಟನೆ ಸಂಬಂಧ ಬಾಲಕ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 26ರ ರಾತ್ರಿ ಈ ಘಟನೆ ನಡೆದಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಹಾಗೂ ಕೆಂಗೇರಿ ಅಂಚೆಪಾಳ್ಯ ನಿವಾಸಿ ಮೊಹಮ್ಮದ್ ಶಫೀವುಲ್ಲಾ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ವಾಲ್ಮೀಕಿನಗರ ನಿವಾಸಿ ತಬರೇಜ್ ಅಲಿಯಾಸ್ ಚೋರ್ ತಬರೇಜ್, ಆತನ ಸಹಚರರಾದ ಅಬ್ರೇಜ್, ಸಲ್ಮಾನ್ ಪಾಷಾ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ.
ಗಾಯಾಳುಗಳ ಪೈಕಿ ಮೊಹಮ್ಮದ್ ಶಫೀವುಲ್ಲಾ ಸಹೋದರಿಯ ಪುತ್ರಿಯನ್ನು ತಬರೇಜ್ ಮದುವೆಯಾಗಿದ್ದ. ಕೌಟುಂಬಿಕ ಕಾರಣಕ್ಕೆ ವಿಚ್ಛೇದನ ನೀಡಿದ್ದಾನೆ. ಹೀಗಾಗಿ ಆಕೆಗೆ ಬೇರೆ ಯುವಕನ ಜತೆ ಮದುವೆ ಮಾಡಿಸಿದ್ದರು. ಈ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿ, ತನ್ನ ಸಹಚರರ ಜತೆ ಶನಿವಾರ ರಾತ್ರಿ ವಾಲ್ಮೀಕಿ ನಗರಕ್ಕೆ ಬಂದಿದ್ದ ಮೊಹಮ್ಮದ್ ಶಫೀವುಲ್ಲಾನನ್ನು ಅಡ್ಡಗಟ್ಟಿ ಜಗಳ ಮಾಡಿ, ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದ. ಅದೇ ವೇಳೆ ಕರ್ತವ್ಯದಲ್ಲಿದ್ದ ಸಂತೋಷ್, ಜಗಳ ಬಿಡಿಸಲು ಸ್ಥಳಕ್ಕೆ ಹೋಗಿದ್ದಾರೆ. ಆಗ ಆರೋಪಿಗಳು ಡ್ರ್ಯಾಗರ್‌ನಿಂದ ಸಂತೋಷ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಘಟನೆಯಲ್ಲಿ ಸಂತೋಷ್ ಅವರ ಎಡಗೈಗೆ ಗಂಭೀರ ಗಾಯವಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯರು ಗಾಯಗೊಂಡಿದ್ದ ಸಂತೋಷ್ ಮತ್ತು ಮೊಹಮ್ಮದ್ ಶಫೀವುಲ್ಲಾ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.