ADVERTISEMENT

ಬೆಂಗಳೂರು ನಗರದಲ್ಲಿ ಕೆಲವೆಡೆ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 18:27 IST
Last Updated 9 ಆಗಸ್ಟ್ 2025, 18:27 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶನಿವಾರ ಗಾಳಿ, ಮಳೆ ಸುರಿದು ವಾತಾವರಣ ತಂಪಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಚೊಕ್ಕಸಂದ್ರ, ಬಾಗಲಕುಂಟೆ ಭಾಗದಲ್ಲಿ 4 ಸೆಂ.ಮೀಗೂ ಅಧಿಕ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಚಿಕ್ಕಬಾಣಾವರ ಭಾಗದಲ್ಲಿ (ರೈಲ್ವೆ ಕೆಳಸೇತುವೆ) ಪ್ರದೇಶದಲ್ಲಿ ನೀರು ನಿಂತು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.

ADVERTISEMENT

ದೊಡ್ಡಬಿದರಕಲ್ಲು, ವಿದ್ಯಾರಣ್ಯಪುರಂ, ಪೀಣ್ಯ ಕೈಗಾರಿಕಾ ಪ್ರದೇಶ, ನಾಗಪುರ, ಮಾದಾವರ, ಸೋಲದೇವನಹಳ್ಳಿ, ಎಂಟನೇ ಮೈಲಿ, ದಾಸರಹಳ್ಳಿ, ಹೆಸರಘಟ್ಟ ರಸ್ತೆ, ಸುಂಕದಕಟ್ಟೆ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕೆಲವೆಡೆ ತುಂತುರು ಮಳೆ ಸುರಿಯತೊಡಗಿತು.

ವಿಜಯನಗರ, ರಾಜಾಜಿನಗರ, ಎಂ.ಜಿ.ರಸ್ತೆ, ಮಲ್ಲೇಶ್ವರಂ, ಚಂದ್ರಾಲೇಔಟ್, ಮಾಗಡಿ ರಸ್ತೆ, ದೀಪಾಂಜಲಿ ನಗರ, ಮೈಸೂರು ರೋಡ್, ನಾಗರಭಾವಿ, ಮೂಡಲಪಾಳ್ಯ, ಗೋವಿಂದರಾಜನಗರ, ರಾಜರಾಜೇಶ್ವರಿ ನಗರ ಸೇರಿ ಹಲವೆಡೆ ಉತ್ತಮ ಮಳೆಯಾಗಿದೆ. ‌

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು, ಸಂಜೆ ಗುಡುಗು ಸಹಿತ ಹಲವೆಡೆ ಮಳೆ ಸುರಿಯಿತು. ಕೆಲವರು ಕೊಡೆ ಹಿಡಿದು ರಸ್ತೆಯಲ್ಲಿ ಸಾಗಿದರೆ, ಮತ್ತೆ ಕೆಲವರು ತೊಯ್ದುಕೊಂಡು ಹೋದರು.

ಮಳೆಯೊಂದಿಗೆ ಗಾಳಿ ವೇಗವೂ ಹೆಚ್ಚಾಗಿದ್ದು, ಕೆಲವು ಪ್ರದೇಶಗಳಲ್ಲಿ ಮರದ ಕೊಂಬೆಗಳು ಬಿದ್ದಿವೆ. ಕೆಲವು ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಟ್ರಾಫಿಕ್‌ ಹೆಚ್ಚಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ರಾತ್ರಿ ಹಲವೆಡೆ ಮಳೆ ಬಿರುಸು ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.