ಬೆಂಗಳೂರು: ನಗರದ ವಿವಿಧೆಡೆ ಸೋಮವಾರ ಸಂಜೆ 6 ಗಂಟೆ ನಂತರ ಬಿರುಸಿನ ಮಳೆ ಆರಂಭವಾಗಿ ತಡರಾತ್ರಿವರೆಗೂ ಮುಂದುವರಿಯಿತು.
ಮಧ್ಯಾಹ್ನದಿಂದಲೂ ಮೋಡ ಕವಿದ ವಾತಾವರಣವಿತ್ತು. ಸಂಜೆ ದಿಢೀರನೆ ಮಳೆ ಆರಂಭವಾಯಿತು. ರಸ್ತೆಗಳಲ್ಲಿ ನೀರು ಹರಿದು ವಾಹನ ಸವಾರರು ಪರದಾಡಿದರು.
ವಿಧಾನಸೌಧ, ಶಾಂತಿನಗರ, ಮೆಜೆಸ್ಟಿಕ್, ಮಲ್ಲೇಶ್ವರ, ಶೇಷಾದ್ರಿಪುರ, ಮೈಸೂರು ರಸ್ತೆ, ವಿಜಯನಗರ, ಬಸವನಗುಡಿಯ ಕೆಲವು ಭಾಗಗಳಲ್ಲಿ ಬಿರುಸಿನ ಮಳೆಯಾಯಿತು. ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್, ಹಲಸೂರು ಸುತ್ತಮುತ್ತ ಮಳೆಯಾಯಿತು.
ಬಾಗಲಕುಂಟೆಯಲ್ಲಿ 3.5 ಸೆಂ.ಮೀ, ಶೆಟ್ಟಿಹಳ್ಳಿಯಲ್ಲಿ 2.8 ಸೆಂ.ಮೀ, ಯಲಹಂಕದಲ್ಲಿ 2.7 ಸೆಂ.ಮೀ, ಚೌಡೇಶ್ವರಿನಗರದಲ್ಲಿ 2 ಸೆಂ.ಮೀಗೂ ಅಧಿಕ ಮಳೆಯಾಗಿದೆ. ವಿದ್ಯಾರಣ್ಯಪುರ, ನಾಗಸಂದ್ರ, ದೊಡ್ಡಬಿದರಕಲ್ಲು ವ್ಯಾಪ್ತಿಯಲ್ಲಿ ಒಂದು ಸೆಂ.ಮೀಗೂ ಹೆಚ್ಚು ಮಳೆಯಾಯಿತು.
ಭಾನುವಾರ ರಾತ್ರಿ ಕೂಡ ನಗರದ ಬಹುತೇಕ ಕಡೆ ಮಳೆಯಾಯಿತು. 11 ಗಂಟೆಗೆ ಆರಂಭವಾದ ಮಳೆ 2 ಗಂಟೆಯವರೆಗೆ ಸುರಿಯಿತು. ಮೆಜೆಸ್ಟಿಕ್, ಶಾಂತಿನಗರ, ಎಂ.ಜಿ.ರಸ್ತೆ, ಪೂರ್ವ ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಬ್ಯಾಟರಾಯನಪುರ ಸುತ್ತಮುತ್ತ 5 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ. ಪೀಣ್ಯ ದಾಸರಹಳ್ಳಿ, ನಾಗಸಂದ್ರ, ಚಿಕ್ಕಬಾಣಾವರ ವ್ಯಾಪ್ತಿಯಲ್ಲಿ ಹದವಾದ ಮಳೆಯಾಯಿತು.
ಜಕ್ಕೂರು, ಎಚ್.ಗೊಲ್ಲಹಳ್ಳಿ, ಕೊಡಿಗೆಹಳ್ಳಿ, ಯಲಹಂಕ, ಅಟ್ಟೂರು, ಪುಲಕೇಶಿ ನಗರ ಮತ್ತು ಸಂಪಂಗಿರಾಮನಗರ ಸುತ್ತಮುತ್ತ 4.5 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ. ಹೊರಮಾವು ಕಾಟನ್‌ಪೇಟೆ, ಸಾರಕ್ಕಿ ಮತ್ತು ಕೋಣನಕುಂಟೆ ಸುತ್ತಮುತ್ತ 3 ಸೆಂ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.