ADVERTISEMENT

ಜಾತಿವಾರು ಗಣತಿ | ಗುರಿ ತಲುಪುವ ಒತ್ತಡ: ಐದೇ ಪ್ರಶ್ನೆಗಳಿಗೆ ಸಮೀಕ್ಷೆ ಪೂರ್ಣ!

ವರುಣ ಹೆಗಡೆ
Published 10 ಅಕ್ಟೋಬರ್ 2025, 0:56 IST
Last Updated 10 ಅಕ್ಟೋಬರ್ 2025, 0:56 IST
ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ
ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದಿನವೊಂದಕ್ಕೆ ನಿಗದಿತ ಗುರಿ ತಲುಪುವ ಒತ್ತಡ ಹಾಗೂ ಜನರ ಅಸಹಕಾರದಿಂದಾಗಿ ‌ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಕೆಲ ಸಮೀಕ್ಷಕರು ನಾಲ್ಕರಿಂದ ಐದೇ ಪ್ರಶ್ನೆಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳಿಸುತ್ತಿದ್ದಾರೆ. 

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೈಗೊಂಡಿರುವ ಈ ಸಮೀಕ್ಷೆ ಜಿಬಿಎ ವ್ಯಾಪ್ತಿಯಲ್ಲಿ ಇದೇ 4ರಿಂದ ಪ್ರಾರಂಭವಾಗಿದೆ. ಇಲ್ಲಿ ಸುಮಾರು 46 ಲಕ್ಷ ಮನೆಗಳಿಗೆ ಯುಎಚ್‌ಐಡಿ ಅಂಟಿಸಲಾಗಿದ್ದು, ಐದು ದಿನಗಳ ಅವಧಿಯಲ್ಲಿ ಶೇ 15ರಷ್ಟು ಸಮೀಕ್ಷೆ ಪೂರ್ಣಗೊಳಿಸಲಾಗಿದೆ.
ಇದೇ 19ರೊಳಗೆ ಈ ಸಮೀಕ್ಷೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಗಡುವು ನೀಡಿದೆ. ಸಮೀಕ್ಷೆಯು
60 ಪ್ರಶ್ನೆಗಳನ್ನು ಒಳಗೊಂಡಿದ್ದರೂ ಮನೆಗಳಿಗೆ ಭೇಟಿ ನೀಡುವ ಸಮೀಕ್ಷಕರಲ್ಲಿ ಕೆಲವರು, ಸಮೀಕ್ಷೆಯನ್ನು ವೇಗವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಹಾಗೂ ಮನೆಯ ಸದಸ್ಯರು ಸಮರ್ಪಕ ಉತ್ತರ ಕೊಡದ ಕಾರಣ ಆಧಾರ್‌ ಸಂಖ್ಯೆ, ಜಾತಿ, ಶಿಕ್ಷಣ ಹಾಗೂ ಆದಾಯದ ಬಗ್ಗೆ ಮಾತ್ರ ಮಾಹಿತಿ ಕಲೆಹಾಕುತ್ತಿದ್ದಾರೆ. ಅದು ಕೂಡ ಮನೆಯ ಎಲ್ಲ ಸದಸ್ಯರಿಂದ ಮಾಹಿತಿ ಪಡೆಯದೆ, ಭೇಟಿ ವೇಳೆ ಮನೆಯಲ್ಲಿ ಇರುವ ವ್ಯಕ್ತಿಗಳ ಮಾಹಿತಿ ಮಾತ್ರ ನಮೂದಿಸಿಕೊಳ್ಳುತ್ತಿದ್ದಾರೆ. 

ಈ ಸಮೀಕ್ಷೆ ನಡೆಸಲು ನಗರದಲ್ಲಿ ಸಮೀಕ್ಷಕರ ಕೊರತೆ ಇರುವ ಕಾರಣ, ಶಿಕ್ಷಕರ ಜತೆಗೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರನ್ನೂ ಬಳಸಿಕೊಳ್ಳಲಾಗಿದೆ. ಅವರಿಗೆ ಸೂಕ್ತ ತರಬೇತಿ ನೀಡದಿರುವುದು, ಜನರಿಂದ ಹೇಗೆ ಮಾಹಿತಿ ಕಲೆಹಾಕಬೇಕೆಂದು ತಿಳಿಸಿಕೊಡದ ಕಾರಣ, ಸಮೀಕ್ಷೆಗೆ ಸಂಬಂಧಿಸಿದಂತೆ ಜನರ ಜತೆಗೆ ಸಂವಹನ ಕಷ್ಟ ಸಾಧ್ಯವಾಗುತ್ತಿದೆ. ಇದರಿಂದಾಗಿಯೂ ಪ್ರಶ್ನಾವಳಿಯಲ್ಲಿನ ಪ್ರಶ್ನೆಗಳನ್ನು ಕೇಳುವ ಗೋಜಿಗೆ ಅವರು ಹೋಗುತ್ತಿಲ್ಲ.

ADVERTISEMENT

‘ಮನೆಗೆ ಬಂದ ಸಮೀಕ್ಷಕರು ಆಧಾರ್ ಸಂಖ್ಯೆ ಕೇಳಿದರು. ಮನೆಯವರು ಹೊರಗಡೆ ಇದ್ದ ಕಾರಣ ಅವರ ಆಧಾರ್ ಸಂಖ್ಯೆ ಪಡೆದು, ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ನಮೂದಿಸಿದರು. ಜಾತಿ ಯಾವುದೆಂದು ಪ್ರಶ್ನಿಸಿದ ಅವರು, ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಕೇಳಿದರು. ಆದಾಯವನ್ನು ಅವರೇ ಒಂದಷ್ಟು ನಮೂದಿಸಿಕೊಂಡರು. ಮನೆಯವರ ಶಿಕ್ಷಣ, ಉದ್ಯೋಗ ಸೇರಿ ಯಾವುದೇ ಮಾಹಿತಿಯನ್ನು ಪಡೆಯಲಿಲ್ಲ. ಹತ್ತು ನಿಮಿಷದೊಳಗೆ ಸಮೀಕ್ಷೆ ಪೂರ್ಣಗೊಳಿಸಿದರು’ ಎಂದು ಹೊಸಕೆರೆಹಳ್ಳಿ ನಿವಾಸಿ ವೀಣಾ ತಿಳಿಸಿದರು. 

ಯುಎಚ್‌ಐಡಿ ಗೊಂದಲ: ನಾಲ್ಕೈದು ಮನೆಗಳಿರುವ ಕಟ್ಟಡಗಳ ಮನೆ ಬಾಗಿಲುಗಳ ಬಳಿ ಅಂಟಿಸಿರುವ ಯುಎಚ್‌ಐಡಿ ಒಳಗೊಂಡ ಸ್ಟಿಕ್ಕರ್‌ಗಳು ಅದಲು ಬದಲು ಆಗಿರುವುದೂ ಸಮೀಕ್ಷಕರ ಗೊಂದಲಕ್ಕೆ ಕಾರಣವಾಗುತ್ತಿದೆ. ಈ ಕಾರಣದಿಂದ ಸಮೀಕ್ಷೆ ಸಾಧ್ಯವಾಗದೆ ಸಮೀಕ್ಷಕರು ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದಾಗಿಯೂ ಸಮೀಕ್ಷಕರು ವಾಪಸ್ ತೆರಳುತ್ತಿದ್ದಾರೆ. ಹೀಗಾಗಿ, ಕೆಲವರು ಸಮೀಕ್ಷೆಯಿಂದ ಹೊರಗೆ ಉಳಿಯುವಂತಾಗಿದೆ. ಇನ್ನೊಂದೆಡೆ ಮನೆಯ ಸದಸ್ಯರು ಹೊರಗಿದ್ದಲ್ಲಿ, ಸಮೀಕ್ಷಕರ ಭೇಟಿ ವೇಳೆ ಅವರ ಸಂಪರ್ಕ ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿ ಇದ್ದವರ ಮಾಹಿತಿಯನ್ನು ಮಾತ್ರ ಸಮೀಕ್ಷಕರು ಪಡೆದುಕೊಳ್ಳುತ್ತಿದ್ದಾರೆ. 

‘ದಸರಾ ರಜೆ ಕಾರಣ ಕುಟುಂಬದ ಸದಸ್ಯರು ಊರಿಗೆ ತೆರಳಿದ್ದರು. ಸಮೀಕ್ಷಕರು ಅವರ ಆಧಾರ್ ಸಂಖ್ಯೆ ಕೇಳಿದರು. ಆದರೆ, ಅವರ ಸಂಪರ್ಕ ಆ ಸಂದರ್ಭದಲ್ಲಿ ಸಾಧ್ಯವಾಗಲಿಲ್ಲ. ಈಗ ರಜೆ ಮುಗಿದ ಕಾರಣ ಕುಟುಂಬಸ್ಥರು ಮತ್ತೆ ಬೆಂಗಳೂರಿಗೆ ಬರುತ್ತಿದ್ದು, ಅವರನ್ನು ಸಮೀಕ್ಷೆಯಿಂದ ಹೊರಗಿಟ್ಟಂತಾಗಿದೆ’ ಎಂದು ಆರ್‌.ಆರ್‌. ನಗರದ ನಿವಾಸಿ ಕಿರಣ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.