ADVERTISEMENT

ವೈದ್ಯ ವಿದ್ಯಾರ್ಥಿಗಳ ಗೌರವ ಧನ ಹೆಚ್ಚಳ ಆದೇಶಕ್ಕೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 15:34 IST
Last Updated 25 ಜುಲೈ 2023, 15:34 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸಂಜಯಗಾಂಧಿ ಟ್ರೌಮಾ, ಅಸ್ಥಿ ಸಂಸ್ಥೆಯ ಆರ್ಥೊಪಿಡಿಕ್ಸ್ ಸ್ನಾತಕೋತ್ತರ ಮತ್ತು ಹಿರಿಯ ನಿವಾಸಿ ವೈದ್ಯಾಧಿಕಾರಿ ಪದವಿಯ 46 ವೈದ್ಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ ಗೌರವ ಧನ ಹೆಚ್ಚಿಸಲು ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ.

ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ‌ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಕೋವಿಡ್-19ರ ಸಂದರ್ಭದಲ್ಲಿ ವೈದ್ಯಕೀಯ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜಿನಲ್ಲಿ ಎಂ.ಎಸ್ ಆರ್ಥೊ ಮತ್ತು ಹಿರಿಯ ನಿವಾಸಿ ವೈದ್ಯಾಧಿಕಾರಿಗಳಾಗಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ 2020ರ ಮೇ 16ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳ ಗೌರವ ಧನವನ್ನು ₹ 30 ಸಾವಿರದಿಂದ ₹ 60 ಸಾವಿರದವರೆಗೆ ಹೆಚ್ಚಿಸಿ 2021ರ ಫೆಬ್ರುವರಿ 23ರಂದು ಆದೇಶಿಸಲಾಗಿತ್ತು.

ADVERTISEMENT

ಈ ಆದೇಶವನ್ನು 2018ರಿಂದ 2020ರ ಅವಧಿಯಲ್ಲಿದ್ದ ಸಂಜಯಗಾಂಧಿ ಟ್ರೌಮಾ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರದಲ್ಲಿ ಎಂ.ಎಸ್. ಆರ್ಥೊಪಿಡಿಕ್ಸ್ ಸ್ನಾತಕೋತ್ತರ ಮತ್ತು ಹಿರಿಯ ನಿವಾಸಿ ವೈದ್ಯಾಧಿಕಾರಿ ಪದವಿಗೆ (ಆರ್‌ಎಂಒ) ಪ್ರವೇಶ ಪಡೆದಿದ್ದ ಡಾ.ಎಚ್. ನಾಗರಾಜು ಸೇರಿದಂತೆ 46 ವೈದ್ಯ ವಿದ್ಯಾರ್ಥಿಗಳಿಗೆ ಅನ್ವಯಿಸಿರಲಿಲ್ಲ. ಇದರಿಂದಾಗಿ ಇವರೆಲ್ಲಾ, "ನಮಗೂ ಪ್ರತಿ ತಿಂಗಳ ಗೌರವ ಧನ ಹೆಚ್ಚಿಸಬೇಕು" ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ 2021ರ ಏಪ್ರಿಲ್ 23ರಂದು ತಿರಸ್ಕರಿಸಿತ್ತು. ಈ ಸಂಬಂಧ ಅವರು ಹೈಕೋರ್ಟ್‌ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದ್ದ ಏಕಸದಸ್ಯ ನ್ಯಾಯಪೀಠ, 2020ರ ಮೇ 6ರಿಂದ ಅನ್ವಯವಾಗುವಂತೆ ಪರಿಷ್ಕೃತ ಗೌರವ ಮತ್ತು ಹಿಂಬಾಕಿ ಪಾವತಿಸುವಂತೆ ಸರ್ಕಾರಕ್ಕೆ 2022ರ ಆಗಸ್ಟ್ 22ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.