ADVERTISEMENT

ಪುರಾವೆ ಸಿಕ್ಕಿದರೆ ಪೊಲೀಸರ ವಿರುದ್ಧ ಕ್ರಮ: ಡಿಸಿಪಿ ಕೆ.ಪರಶುರಾಮ

ಹೋಟೆಲ್ ಬಾಲ್ಕನಿಯಿಂದ ಯುವತಿ ಕೆಳಗೆ ಬಿದ್ದಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 16:04 IST
Last Updated 16 ಡಿಸೆಂಬರ್ 2025, 16:04 IST
ಕೆ.ಪರಶುರಾಮ
ಕೆ.ಪರಶುರಾಮ   

ಬೆಂಗಳೂರು: ‘ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಹೋಟೆಲ್ ಬಾಲ್ಕನಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧದ ಆರೋಪಗಳಿಗೆ ಸೂಕ್ತ ಪುರಾವೆಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ ತಿಳಿಸಿದರು. 

ಯುವತಿಯ ತಂದೆ ನೀಡಿರುವ ದೂರಿನ ಅನ್ವಯ ಹೋಟೆಲ್ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಘಟನೆಯಲ್ಲಿ ಮಾರತ್ತಹಳ್ಳಿ ನಿವಾಸಿ ವೈಷ್ಣವಿ (21) ಗಂಭೀರವಾಗಿ ಗಾಯಗೊಂಡಿದ್ದರು. ವೈಷ್ಣವಿ ಅವರ ತಂದೆ ಅಂತೋನಿ ರಾಜ್ ದೂರು ನೀಡಿದ್ದಾರೆ.  

ADVERTISEMENT

ಗಾಯಾಳು ವೈಷ್ಣವಿ ಡಿ.14ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಎಇಸಿಎಸ್‌ ಲೇಔಟ್‌ನಲ್ಲಿರುವ ಸೀ ಎಸ್ಟಾ ಲಾಡ್ಜ್‌ನಲ್ಲಿ ತನ್ನ 7 ಮಂದಿ ಸ್ನೇಹಿತರ ಜತೆ ಪಾರ್ಟಿ ಮಾಡಲು ತೆರಳಿದ್ದರು. ಈ ವೇಳೆ ಸಂಗೀತ ಹಾಕಿಕೊಂಡು ಡಾನ್ಸ್ ಮಾಡುತ್ತಿದ್ದರು. ಅದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗಿತ್ತು. ಹೀಗಾಗಿ, ಸ್ಥಳೀಯರು ಪೊಲೀಸ್‌ ಸಹಾಯವಾಣಿ 112ಕ್ಕೆ ದೂರು ನೀಡಿದ್ದರು. ಪೊಲೀಸರು ಲಾಡ್ಜ್‌ಗೆ ತೆರಳಿದ್ದ ವೇಳೆ ಘಟನೆ ನಡೆದಿತ್ತು.

‘ಹೊಯ್ಸಳ ಪೊಲೀಸರು ಭಾನುವಾರ ಬೆಳಿಗ್ಗೆ 5.30ರ ಹೊತ್ತಿಗೆ ಆ ಹೋಟೆಲ್​ಗೆ ಹೋಗಿದ್ದರು. ಈ ವೇಳೆ, ನಾಲ್ಕನೇ ಮಹಡಿಯ ಕೊಠಡಿಯಲ್ಲಿ 8 ಮಂದಿ ಇದ್ದರು. ಪೊಲೀಸರು ಬಾಡಿವೋರ್ನ್​ ಕ್ಯಾಮೆರಾ ಆನ್​ ಮಾಡಿಕೊಂಡು ಅವರನ್ನು ವಿಚಾರಿಸಿದ್ದಾರೆ. ಅವರ ಐಡೆಂಟಿಟಿ ಕಾರ್ಡ್​ ಹಾಗೂ ವಿಳಾಸ ಕೇಳಿದ್ದಾರೆ. ಜೊತೆಗೆ ಸೂಕ್ತ ತಿಳಿವಳಿಕೆಯನ್ನು ಕೊಟ್ಟಿದ್ದಾರೆ. ಇಬ್ಬರು ಯುವಕರನ್ನು ಕರೆದುಕೊಂಡು ರಿಸೆಪ್ಷನ್ ಬಳಿ ಬಂದಾಗ ಘಟನೆ ನಡೆದಿದೆ’ ಎಂದು ಡಿಸಿಪಿ  ತಿಳಿಸಿದ್ದಾರೆ.

‘ಕಾಂಪೌಂಡ್​ನಲ್ಲಿ ಚೂಪಾದ ಗ್ರಿಲ್​ಗಳಿದ್ದ ಕಾರಣ ಯುವತಿಗೆ ಗಂಭೀರ ಗಾಯಗಳಾಗಿದೆ. ತಕ್ಷಣ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳದಲ್ಲಿದ್ದವರು ದಾಖಲಿಸಿದ್ದಾರೆ. ಯುವತಿಯ ಪರಿಸ್ಥಿತಿ‌ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೋಟೆಲ್‌ನವರು ಪಾಲಿಕೆಯಿಂದ ಅನುಮತಿ ಪಡೆದಿಲ್ಲದಿರುವುದರಿಂದ ಕ್ರಮ ಕೈಗೊಳ್ಳಲು ಜಿಬಿಎಗೆ ಸೂಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.