ADVERTISEMENT

ಹೋಟೆಲ್‌, ‌ಪಿ.ಜಿಯಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ಗೆ ಕನ್ನ: ಕುಖ್ಯಾತ ಕಳ್ಳನ ಬಂಧನ

ಆರೋಪಿ ಬಂಧನ, ತಲಘಟ್ಟಪುರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 23:30 IST
Last Updated 22 ಆಗಸ್ಟ್ 2025, 23:30 IST
   

ಬೆಂಗಳೂರು: ಹೋಟೆಲ್ ಹಾಗೂ ಪೇಯಿಂಗ್ ಗೆಸ್ಟ್‌ಗಳಲ್ಲಿ(ಪಿ.ಜಿ) ವಾಸ್ತವ್ಯ ಮಾಡಿ ಮೊಬೈಲ್‌, ಲ್ಯಾಪ್‌ಟಾಪ್‌, ನಗದು ಹಾಗೂ ದಾಖಲೆಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ತಲಘಟ್ಟಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಎಸ್‌.ನಾಗರಾಜ್‌ (38) ಬಂಧಿತ ಆರೋಪಿ.

ಆರೋಪಿಯಿಂದ 14 ಮೊಬೈಲ್‌ ಫೋನ್‌, ನಾಲ್ಕು ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹6 ಲಕ್ಷ ಎಂದು ಅಂದಾಜಿಸಲಾಗಿದೆ.

ADVERTISEMENT

ತಮಿಳುನಾಡಿನಲ್ಲೂ ಇದೇ ರೀತಿಯ ಕೃತ್ಯ ಎಸಗಿ ಅಲ್ಲಿನ ಪೊಲೀಸರಿಗೆ ನಾಗರಾಜ್ ಸಿಕ್ಕಿ ಬಿದ್ದು ಕಾರಾಗೃಹ ಸೇರಿದ್ದ. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಕಳ್ಳತನ ಮಾಡಿದ್ದ ಆರೋಪದ ಮೇಲೆ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ತಲಘಟ್ಟಪುರ ಮೆಟ್ರೊ ನಿಲ್ದಾಣದ ಬಳಿಯ ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.

‘ದೂರುದಾರರು ನೆಲಸಿದ್ದ ಪಿ.ಜಿಗೆ ಜುಲೈ 17ರ ರಾತ್ರಿ ನಾಗರಾಜ್ ತಂಗಲು ಬಂದಿದ್ದ. ಅಂದು ರಾತ್ರಿ ದೂರುದಾರರು ಹೊರಗೆ ಹೋಗಿದ್ದ ವೇಳೆ ಐ–ಫೋನ್, ಲ್ಯಾಪ್‌ಟಾಪ್‌ ಹಾಗೂ ಕೆಲವು ದಾಖಲೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘ದೂರುದಾರರು ನೀಡಿದ ಸುಳಿವು ಹಾಗೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲಾಯಿತು. ಹೋಟೆಲ್‌ ಹಾಗೂ ಪಿ.ಜಿಗಳಲ್ಲಿ ಮೂರರಿಂದ ನಾಲ್ಕು ದಿನ ವಾಸ್ತವ್ಯ ಮಾಡಿ ರಾತ್ರಿ ವೇಳೆ ಎಲ್ಲರೂ ಮಲಗಿದ ಮೇಲೆ ಕೊಠಡಿಗಳಿಗೆ ತೆರಳಿ ಮೊಬೈಲ್‌, ಲ್ಯಾಪ್‌ಟಾಪ್‌, ದಾಖಲೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗುತ್ತಿದ್ದೆ ಎಂಬುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ತಲಘಟ್ಟಪುರ, ಕಬ್ಬನ್‌ಪಾರ್ಕ್‌, ನಂದಿನಿಲೇಔಟ್‌, ವೈಯಾಲಿಕಾವಲ್‌, ಕೋಣನಕುಂಟೆ, ಶೇಷಾದ್ರಿಪುರ, ಯಲಹಂಕ, ಗೋವಿಂದಪುರ, ದೇವನಹಳ್ಳಿ, , ತಿಪಟೂರು ಪಟ್ಟಣ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಪಿ.ಜಿ ಹಾಗೂ ಹೋಟೆಲ್‌ಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗೆ ವಿಪರೀತ ಮದ್ಯ ಸೇವನೆ ಅಭ್ಯಾಸವಿತ್ತು. ಮದ್ಯ ಖರೀದಿಗೆಂದು ಅತಿಯಾದ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲು ಕಳ್ಳತನ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.  

ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ್‌ ಮಾರ್ಗದರ್ಶನದಲ್ಲಿ ತಲಘಟ್ಟಪುರ ಇನ್‌ಸ್ಪೆಕ್ಟರ್‌ ಆರ್.ಎಸ್‌.ಚೌಧರಿ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.