ಬೆಂಗಳೂರು: ಅನಧಿಕೃತವಾಗಿ ನಡೆಯುತ್ತಿರುವ ರ್‍ಯಾಪಿಡೊ, ಓಲಾ, ಉಬರ್ (ಬೈಕ್–ಟ್ಯಾಕ್ಸಿ) ಹಾಗೂ ಗೂಡ್ಸ್ (ಪೋರ್ಟರ್) ಸಂಸ್ಥೆಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಹಾಗೂ ‘ಸ್ನೇಹಜೀವಿ’ ಚಾಲಕರ ಟ್ರೇಡ್ ಯೂನಿಯನ್ ಪ್ರತಿನಿಧಿಗಳು ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಖಾಲಿ ಪಾತ್ರೆ ಹಾಗೂ ತಟ್ಟೆ ಹಿಡಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಪ್ಪುಪಟ್ಟಿ ಧರಿಸಿ ಘೋಷಣೆ ಕೂಗಿದರು.
ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ‘ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳೇ ಕಾನೂನು ಬಾಹಿರ ಸಂಸ್ಥೆಗಳ ಪೋಷಕರಾಗಿದ್ದಾರೆ’ ಎಂದು ಆಪಾದಿಸಿದರು.
‘ಸರ್ಕಾರದ ಧೋರಣೆಯಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದರ ತಾರತಮ್ಯ ಮಾಡುತ್ತಿರುವ ಓಲಾ, ಉಬರ್‌ಗೆ ಕೇಂದ್ರ ಸರ್ಕಾರ ಈಗಾಗಲೇ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದೆ. ಚಾಲಕರ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೂ ಕೂಡ ನೇರ ಹೊಣೆ. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.
ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯ ಅಧ್ಯಕ್ಷ ಸಂತೋಷ್ ಕುಮಾರ್, ಕಾನೂನು ಬಾಹಿರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತಮಟ್ಟದ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.