ADVERTISEMENT

ಬೆಂಗಳೂರು: ಒಳಮೀಸಲಾತಿ ವರದಿ ಅಂಗೀಕರಿಸಿದರೆ ಹೋರಾಟ

ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 15:33 IST
Last Updated 16 ಆಗಸ್ಟ್ 2025, 15:33 IST
   

ಬೆಂಗಳೂರು: ಒಳಮೀಸಲಾತಿಗೆ ಸಂಬಂಧಿಸಿ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಸಮಿತಿ ನೀಡಿರುವ ವರದಿ ಅಂಗೀಕರಿಸಿದರೆ, ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಸಚಿವರು, ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡುವವರೆಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಎಚ್ಚರಿಸಿದೆ.

ಪರಿಶಿಷ್ಟ ಜಾತಿಗಳಲ್ಲಿ ಸಮಾನ ಜಾತಿಯ ಉಪಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸಲು ಸರ್ಕಾರವು ಆಯೋಗಕ್ಕೆ ನೀಡಿರುವ ನಿಬಂಧನೆಗಳಲ್ಲಿ ತಿಳಿಸಿದೆ. ಆದರೂ ಆಯೋಗವು ‘ಪ್ರವರ್ಗ ಎ ಗುಂಪನ್ನು ಸೃಜಿಸಿ ಬಲಗೈ, ಹೊಲಯ, ಛಲವಾದಿ  ಸಂಬಂಧಿತ ಜಾತಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಹೊಲಯ ಸಮುದಾಯದ ಜನಸಂಖ್ಯೆಯನ್ನು ವಿಭಜಿಸಿ ಕಡಿಮೆ ಮಾಡಿ ತೋರಿಸಲಾಗಿದೆ ಎಂದು ಆರೋಪಿಸಿದೆ.

ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂಬುದು ಜಾತಿಗಳಲ್ಲದೇ ಇದ್ದರೂ ಜಾತಿಗಳಿಗೆ ನಿಗದಿಪಡಿಸುವ ಮೀಸಲಾತಿಯಲ್ಲಿ ಶೇ 1ರಷ್ಟನ್ನು ನೀಡಿದೆ. ಹಾಗಾಗಿ ಈ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ವರದಿ ಅಂಗೀಕರಿಸಿದರೆ ಪರಿಶಿಷ್ಟ ಜಾತಿಯ ಸಚಿವರು, ಶಾಸಕರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ADVERTISEMENT

ವರದಿ ತಿರಸ್ಕರಿಸಿ, ಹೊಸದಾಗಿ ಜಾತಿ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಆ.18ರಂದು ಬೆಳಿಗ್ಗೆ 11ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.