ಅಪಘಾತ, –ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಇಲ್ಲಿನ ಜೀವನ್‌ವಿಮಾ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಪಾದಚಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಜೆಬಿ ನಗರದ ಆನಂದಪುರದ ನಿವಾಸಿ ಜಯಪಾಲ (60) ಮೃತಪಟ್ಟವರು.
ಮಹಿಳೆಯೊಬ್ಬರು ವೇಗವಾಗಿ ಜೀಪ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಹಳೆ ವಿಮಾನ ನಿಲ್ದಾಣ ರಸ್ತೆಯ ಮರುಗೇಶ್‌ಪಾಳ್ಯದ ರಾಜೇಶ್ವರಿ ಚಿತ್ರಮಂದಿರದ ಬಳಿ ಜಯಪಾಲ ಅವರು ರಸ್ತೆ ದಾಟುತ್ತಿದ್ದಾಗ ಜೀಪ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ಐಎಸ್‌ಆರ್‌ಒ ಜಂಕ್ಷನ್ ಕಡೆಯಿಂದ ಎಚ್‌ಎಎಲ್ ಕಡೆಗೆ ಜೀಪ್ ತೆರಳುತ್ತಿತ್ತು. ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂಬುದು ಕಂಡುಬಂದಿದೆ. ಜೀಪ್ ವಶಕ್ಕೆ ಪಡೆದು, ಚಾಲನೆ ಮಾಡುತ್ತಿದ್ದ ಅಂಜಲಿ ನರೇಂದ್ರನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಜಯಪಾಲ ಅವರ ಪುತ್ರ ಶಿವಕುಮಾರ್ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.