ADVERTISEMENT

Bengaluru Crime | ಮನೆ, ಚಿನ್ನಾಭರಣ ಅಂಗಡಿಯಲ್ಲಿ ಕಳವು: ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 0:12 IST
Last Updated 14 ಮೇ 2025, 0:12 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಬೆಳ್ಳಿ ಸಾಮಗ್ರಿ
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಬೆಳ್ಳಿ ಸಾಮಗ್ರಿ   

ಬೆಂಗಳೂರು: ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳವು ಮಾಡಿದ್ದ ಆರೋಪದ ಅಡಿ ಚಿತ್ರದುರ್ಗದ ನಿವಾಸಿ ಶಾಲಿನಿ(30) ಎಂಬಾಕೆಯನ್ನು ಬಂಧಿಸಿ ₹10 ಲಕ್ಷ ಮೌಲ್ಯದ 113 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. 

ಎಚ್‌ಎಸ್‌ಆರ್ ಲೇಔಟ್‌ನ 1ನೇ ಸೆಕ್ಟರ್ ನಿವಾಸಿ, ಐ.ಟಿ ಉದ್ಯೋಗಿ ಅಕ್ಷಯ್ ಕೃಷ್ಣ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು.

ADVERTISEMENT

ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಶಾಲಿನಿ, ಪತಿ ಮತ್ತು ಮಕ್ಕಳ ಜತೆ ಸೋಮಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಪತಿ ಆಟೊ ಚಾಲಕನಾಗಿದ್ದು, ಶಾಲಿನಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಳು. ದೂರುದಾರ ಮನೆಯಲ್ಲಿದ್ದ ವೃದ್ಧೆಯೊಬ್ಬರನ್ನು ಶಾಲಿನಿ ಮೂರು ವರ್ಷಗಳಿಂದ ನೋಡಿಕೊಳ್ಳುತ್ತಿದ್ದಳು. ಈ ಮಧ್ಯೆಯೇ ಮನೆಯಲ್ಲಿಟ್ಟಿದ್ದ ಚಿನ್ನವನ್ನು ಕಳ್ಳತನ ಮಾಡಿ ಚಿತ್ರದುರ್ಗಕ್ಕೆ ಪರಾರಿ ಆಗಿದ್ದಳು ಎಂದು ಪೊಲೀಸರು ಹೇಳಿದರು.

ಅನುಮಾನಗೊಂಡು ಬೀರು ಪರಿಶೀಲಿಸಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿತ್ತು. ಅಕ್ಷಯ್ ಕೃಷ್ಣ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿ ಶಾಲಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ.

ಮತ್ತೊಂದು ಪ್ರಕರಣ: ತಾನು ಕೆಲಸ ಮಾಡುತ್ತಿದ್ದ ಚಿನ್ನಾಭರಣ ಅಂಗಡಿಯಲ್ಲೇ ಕಳವು ಮಾಡಿದ್ದ ಆರೋಪಿಯನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗದ ಗೋಪಾಲ್ ನಾಯಕ್(30) ಬಂಧಿತ. ಆರೋಪಿಯಿಂದ ₹3 ಲಕ್ಷ ಮೌಲ್ಯದ 3 ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಸುಮಾರು ಐದು ವರ್ಷಗಳಿಂದ ಠಾಣೆ ವ್ಯಾಪ್ತಿಯ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಯ ಕೆಳ ಭಾಗದಲ್ಲಿ ಚಿನ್ನಾಭರಣ ಪಾಲಿಶ್ ಮಾಡುವ ಮಳಿಗೆ ಇದ್ದು, ಅಲ್ಲಿಗೆ ಆರೋಪಿಯೇ ಬೆಳ್ಳಿ ವಸ್ತುಗಳನ್ನು ಪಾಲಿಶ್‌ಗೆ ಕೊಂಡೊಯ್ಯುತ್ತಿದ್ದ. ಈ ಮಧ್ಯೆ ಪಾಲಿಶ್ ಮಳಿಗೆ ಪಕ್ಕದಲ್ಲಿ ನಿಲುಗಡೆ ಮಾಡುತ್ತಿದ್ದ ಬೈಕ್‌ನಲ್ಲಿ ಬೆಳ್ಳಿ ಸಾಮಗ್ರಿಗಳನ್ನು ಇಟ್ಟು, ಸಂಜೆ ಕೆಲಸ ಮುಗಿಸಿಕೊಂಡು ಹೋಗುವಾಗ ಕೊಂಡೊಯ್ಯುತ್ತಿದ್ದ. ಇತ್ತೀಚೆಗೆ ಜ್ಯೂವೆಲ್ಲರಿ ಶಾಪ್‌ನಲ್ಲಿ ಲೆಕ್ಕ ಪರಿಶೋಧನೆ ಮಾಡುವಾಗ ಬೆಳ್ಳಿ ವಸ್ತುಗಳು ಕಳವು ಆಗಿರುವುದು ಪತ್ತೆ ಆಗಿತ್ತು ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.