ಬೆಂಗಳೂರು: ಬೆಂಗಳೂರು ಉಪನಗರ ಕಾರಿಡಾರ್–2 ನಿರ್ಮಾಣಕ್ಕಾಗಿ ಭೂಸ್ವಾಧೀನದ ವೇಳೆ ರೈಲ್ವೆ ಮಾರ್ಗದ ಪಕ್ಕದಲ್ಲಿದ್ದ ₹40 ಕೋಟಿ ಮೌಲ್ಯದ ಭೂಮಿ ಒತ್ತುವರಿಯಾಗಿರುವುದು ಗೊತ್ತಾಗಿದ್ದು, ಸುಮಾರು 20 ಗುಂಟೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕು ಮ್ಯಾಕಲ ಚನ್ನೇನಹಳ್ಳಿ ಗ್ರಾಮ ಹಾಗೂ ಯಲಹಂಕ ಪೀಣ್ಯ ಪ್ಲಾಂಟೇಶನ್‌ಗೆ ಸೇರಿಕೊಂಡ ಗಡಿ ಮಧ್ಯದಲ್ಲಿ ರೈಲ್ವೆ ಮಾರ್ಗವಿದೆ. ಇದಕ್ಕೆ ಹೊಂದಿಕೊಂಡ 500 ಮೀಟರ್ ಖರಾಬು ಜಮೀನು ಒತ್ತುವರಿಯಾಗಿರುವುದು ಭೂಸ್ವಾಧೀನದ ವೇಳೆ ಪತ್ತೆಯಾಯಿತು.
ಈ ಭೂಮಿಯನ್ನು ಬಾಗಮಾನೆ ಡೆವಲಪರ್ಸ್‌ನವರು ಒತ್ತುವರಿ ಮಾಡಿರುವುದು ಪರಿಶೀಲನೆ ವೇಳೆ ತಿಳಿಯಿತು. ಇದು ರೈಲ್ವೆ ರಸ್ತೆಗೆ ಸೇರಿದ ಜಮೀನಾಗಿದೆ ಎಂದು ಬೆಂಗಳೂರು ಉತ್ತರ ಹಾಗೂ ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢಪಡಿಸಿದರು.
ಬಾಗಮಾನೆ ಡೆವಲಪರ್ಸ್ ಪ್ರತಿನಿಧಿಗಳಿಗೆ ಒತ್ತುವರಿ ಬಗ್ಗೆ ತಿಳಿವಳಿಕೆ ನೀಡಿ, ಭೂಮಿಯನ್ನು ವಶಪಡಿಸಿಕೊಂಡು ಉಪನಗರ ಕಾರಿಡಾರ್ ಯೋಜನೆ ಕೆ ರೈಡ್‌ಗೆ ಹಸ್ತಾಂತರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.